ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಮಳೆ ಬಂದರೆ ಸಿಂದಗಿ ನಗರದ ಸಂಗಮ್ ಬಾರ್ ಬಳಿಯ ಮುಖ್ಯ ರಸ್ತೆಯಲ್ಲಿನ ಅಂಗಡಿ ಮತ್ತು ಮನೆಗಳಲ್ಲಿ ನೀರು ಒಳಗಡೆ ತುಂಬಿದ್ದನ್ನು ಕಣ್ಣಾರೆ ಕಂಡಿದ್ದು ಇದೆ. ಹೀಗಾಗಿ ನಗರದ ಜನತೆಯ ಬಹುದಿನಗಳ ಬೇಡಿಕೆಯಾದ ಈ ಮುಖ್ಯ ರಸ್ತೆಯ ಕಾಮಗಾರಿ ಸಂತೋಷದಿಂದ ನೇರವೇರಿಸಿದ್ದೇವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಸೋಂಪುರ ರಸ್ತೆಯ ಬಸವ ಮಂಟಪದ ಹತ್ತಿರ ಲೋಕೋಪಯೋಗಿ ಇಲಾಖೆ ಸಿಂದಗಿ ಉಪವಿಭಾಗ, ೨೦೨೪-೨೫ನೆಯ ಸಾಲಿನ ೫೦೫೪-೦೪-೩೩೭-೦-೦೧-೧೫೪ ಅಪೆಂಡಿಕ್ಸ್ ಯೋಜನೆಯ ಅಡಿಯಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ತಾಂಬಾ-ಸಿಂದಗಿ ವಾಯಾ ಬಂಥನಾಳ-ಚಾಂದಕವಟೆ-ಸೋಂಪುರ ಜಿಲ್ಲಾ ಮುಖ್ಯ ರಸ್ತೆ(ಸಿಂದಗಿ ಪಟ್ಟಣದ ಪರಿಮಿತಿ) ೧ಕೋಟಿ ೫೦ಲಕ್ಷ ರೂ. ಅನುದಾನದ ಸಿಸಿ ರಸ್ತೆ ಹಾಗೂ ಸಿಸಿ ಡ್ರೇನ್ ನಿರ್ಮಿಸುವ ಕಾಮಗಾರಿ ಭೂಮಿ ಪೂಜೆ ನೇರವೇರಿಸಿ ಮಾತನಾಡಿದರು.
ಇಲ್ಲಿನ ನಿವಾಸಿಗಳಿಗೆ ಉತ್ತಮ ಗುಣಮಟ್ಟದ ರಸ್ತೆ ಮಾಡಿಕೊಡಬೇಕು ಎನ್ನುವ ದೃಷ್ಟಿಯಿಂದ ಈ ಕಾಮಗಾರಿಯ ಭೂಮಿ ಪೂಜೆಯನ್ನು ನೇರವೇರಿಸಲಾಗಿದೆ. ಪುರಸಭೆ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಹಾಗೂ ಪುರಸಭೆ ಸದಸ್ಯರು ಈ ೧ಕೋಟಿ ೫೦ಲಕ್ಷ ರೂ ಅನುದಾನದ ಕಾಮಗಾರಿಯನ್ನು ಅತ್ಯಂತ ಗುಣಮಟ್ಟದಿಂದ ತಾವು ಪಡೆದುಕೊಳ್ಳಬೇಕು. ಸಾರ್ವಜನಿಕರಿಗೆ ಈ ರಸ್ತೆಯ ಮೂಲಕ ಅನುಕೂಲ ಮಾಡಿಕೊಡಬೇಕು ಎಂದು ನೀಡಿದರು.
ಈ ವೇಳೆ ಸ್ಥಳೀಯ ನಿವಾಸಿ ಪ್ರವೀಣ ಹಾಲಹಳ್ಳಿ ಅವರು, ಡಾಂಬರ ರಸ್ತೆ ನಿರ್ಮಿಸುವಂತೆ ಶಾಸಕರಿಗೆ ಮನವಿ ಮಾಡಿಕೊಂಡಾಗ, ಅವರು ಅದಕ್ಕೆ ಉತ್ತರಿಸಿ ಮಳೆಗಾಲದಲ್ಲಿ ಡಾಂಬರ ಮೇಲೆ ಅತೀ ಹೆಚ್ಚು ನೀರು ಬಿಳುವುದರಿಂದ ರಸ್ತೆಯ ಅವಧಿ ಬಹಳ ಕಡಿಮೆಯಾಗುತ್ತದೆ. ೩-೪ ತಿಂಗಳಲ್ಲಿ ರಸ್ತೆ ಹಾಳಾಗುತ್ತದೆ. ಕಾರಣ ಸಿಸಿ ರಸ್ತೆಯೇ ಸೂಕ್ತ ಎಂದು ತಿಳಿ ಹೇಳಿದರು.
ಈ ವೇಳೆ ಪುರಸಭೆ ಉಪಾಧ್ಯಕ್ಷ ರಾಜಣ್ಣ ನಾರಾಯಣಕರ ಮಾತನಾಡಿ, ರಸ್ತೆ ಕಾಮಗಾರಿ ಪ್ರಾರಂಭಿಸುವ ಮುನ್ನ ಒಳಚರಂಡಿ ಹಾಗೂ ನೀರಿನ ಪೈಪ್‌ಲೈನ್ ಸರಿಪಡಿಸಿಕೊಳ್ಳಬೇಕು ಎಂದರು.
ಈ ವೇಳೆ ಲೋಕೋಪಯೋಗಿ ಇಲಾಖೆಯ ಎಇಇ ಅರುಣಕುಮಾರ, ಪುರಸಭೆ ಮುಖ್ಯಾಧಿಕಾರಿ ಎಸ್.ರಾಜಶೇಖರ, ಪ್ರವೀಣ ಹಾಲಹಳ್ಳಿ, ಪುರಸಭೆ ಸದಸ್ಯ ಪ್ರತಿನಿಧಿ ಬಸವರಾಜ ಸಜ್ಜನ, ಮುಖಂಡರಾದ ರಜತ ತಾಂಬೆ, ರವಿ ನಾವಿ ಸೇರಿದಂತೆ ಪಕ್ಷದ ಮುಖಂಡರು, ಸಾರ್ವಜನಿಕರು ಇದ್ದರು.

