ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸವನಬಾಗೇವಾಡಿಯಿಂದ ಬ್ಯಾಲ್ಯಾಳದವರೆಗೂ ಬಸ್ ಸೌಕರ್ಯಕ್ಕೆ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದಿಂದ ನಿಡಗುಂದಿ ತಾಲೂಕಿನ ಬ್ಯಾಲ್ಯಾಳ ಗ್ರಾಮದವರೆಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಗುರುವಾರ ಸ್ಥಳೀಯ ಬಸ್ ಡಿಪೋ ವ್ಯವಸ್ಥಾಪಕ ಬಿ.ಬಿ.ಚಿತ್ತವಾಡಗಿ ಅವರಿಗೆ ಮನವಿ ಸಲ್ಲಿಸಿದರು.
ಅವರು ಸಲ್ಲಿಸಿದ ಮನವಿಯಲ್ಲಿ ಪಟ್ಟಣದಿಂದ ತಾಲೂಕಿನ ಇವಣಗಿ, ಹಂಚಿನಾಳ, ನರಸಲಗಿ, ನರಸಲಗಿ ತಾಂಡಾ, ಅಂಬಳನೂರ, ಅಂಬಳನೂರ ತಾಂಡಾ, ಕಣಕಾಲ ಮಾರ್ಗವಾಗಿ ನಿಡಗುಂದಿ ತಾಲೂಕಿನ ಬ್ಯಾಲ್ಯಾಳ ಗ್ರಾಮದವರೆಗೂ ಸರಿಯಾದ ಸಮಯಕ್ಕೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದ ಕಾರಣದಿಂದಾಗಿ ಈ ಗ್ರಾಮಗಳಿಂದ ಬಸವನಬಾಗೇವಾಡಿಯ ವಿವಿಧ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಸರಿಯಾದ ಸಮಯಕ್ಕೆ ಬಾರದಂತಾಗಿದೆ. ಇದರಿಂದಾಗಿ ಅವರೆಲ್ಲರೂ ಶಿಕ್ಷಣದಿಂದ ವಂಚಿತರಾಗುವ ಪರಿಸ್ಥಿತಿ ಇದೆ. ಅದರಲ್ಲೂ ವಿದ್ಯಾರ್ಥಿನಿಯರಿಗೆ ತುಂಬಾ ತೊಂದರೆಯಾಗುತ್ತಿದೆ. ಬಸ್ ಘಟಕ ವ್ಯವಸ್ಥಾಪಕರು ಈ ಮಾರ್ಗವಾಗಿ ಬೆಳಗ್ಗೆ ಎಂಟು ಗಂಟೆಗೆ, ಮಧ್ಯಾನ್ಹ ಎರಡು ಗಂಟೆಗೆ , ಸಂಜೆ ೫ ಗಂಟೆಗೆ ಬಸ್ ವ್ಯವಸ್ಥೆ ಕಲ್ಪಿಸುವ ಮೂಲಕ ಈ ಗ್ರಾಮಗಳಿಂದ ಬಸವನಬಾಗೇವಾಡಿಗೆ ಬರುವ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಕೂಡಲೇ ಬಸ್ ಘಟಕ ವ್ಯವಸ್ಥಾಪಕರು ಬಸವನಬಾಗೇವಾಡಿಯಿಂದ ಇವಣಗಿ, ಹಂಚಿನಾಳ, ನರಸಲಗಿ,ಕಣಕಾಲ ಮಾರ್ಗವಾಗಿ ಬ್ಯಾಲ್ಯಾಳ ಗ್ರಾಮದವರೆಗೂ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮನಗೌಡ ಪಾಟೀಲ, ತಾಲೂಕು ಅಧ್ಯಕ್ಷ ಪರಶುರಾಮ ಅಡಗಿಮನಿ, ಮುಖಂಡರಾದ ಅರುಣ ಚಲವಾದಿ, ವಿದ್ಯಾರ್ಥಿಗಳಾದ ದ್ಯಾಮನಗೌಡ ಪಾಟೀಲ, ಗಣೇಶ ಹಿರೇಮಠ, ವಿನೋದ ಪಾಟೀಲ, ಅವ್ವಣ್ಣ ಮಾದರ, ವಿಜಯ ಹಿರೇಮಠ, ಗಾಯತ್ರಿ ಸಜ್ಜ, ಪೂಜಾ ಬಡಿಗೇರ, ಭೂಮಿಕಾ ಕೋಲಕಾರ, ಮಂಜುಳಾ ಹಿರೇಕುರಬರ, ನಿಖಿತಾ ಪಾಟೀಲ,ಅವ್ವಮ್ಮ ಕೋಳೂರ, ಶಿಲ್ಪಾ ಕೋಳೂರ, ರಮೇಶ ಚಲವಾದಿ, ಪವಿತ್ರಾ ಮಾದರ, ಬೋರಮ್ಮ ಕೋಳೂರ, ಪ್ರಿಯಾಂಕ ಗ್ವಾತಗಿ, ಅಕ್ಷತಾ ಪಾಟೀಲ ಇತರರು ಇದ್ದರು.

