ಉದಯರಶ್ಮಿ ದಿನಪತ್ರಿಕೆ
ಇಂಡಿ: ಪಟ್ಟಣದ ಸಿಂದಗಿ ರಸ್ತೆಯಲ್ಲಿರುವ ಶ್ರೀ ದಾನಮ್ಮದೇವಿ ದೇವಸ್ಥಾನದಲ್ಲಿ ದಾನಮ್ಮ ದೇವಿಯ ತೃತೀಯ ವರ್ಷದ ಜಾತ್ರಾ ಮಹೋತ್ಸವವನ್ನು ಡಿ.೧ ರ ಭಾನುವಾರ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನ ಟ್ರಸ್ಟ ಕಮೀಟಿ ಅಧ್ಯಕ್ಷ ಅನೀಲಪ್ರಸಾದ ಏಳಗಿ ಹೇಳಿದರು.
ಅವರು ಗುರುವಾರ ದಾನಮ್ಮದೇವಿ ದೇವಸ್ಥಾನದ ಆವರಣದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಗುಡ್ಡಾಪುರ ದಾನಮ್ಮದೇವಿಗೆ ಇಂಡಿ ತಾಲೂಕಿನಲ್ಲಿ ಅತಿ ಹೆಚ್ಚು ಭಕ್ತರಿದ್ದು, ಎಲ್ಲ ಭಕ್ತರ ಅಪೇಕ್ಷೆ ಮೇರೆಗೆ ಇಂಡಿ ನಗರದಲ್ಲಿ ದಾನಮ್ಮದೇವಿ ದೇವಸ್ಥಾನ ನಿರ್ಮಿಸಲಾಗಿದೆ. ಪ್ರತಿ ವರ್ಷವೂ ಸಹ ಜಾತ್ರಾ ಮಹೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಡಿಸೆಂಬರ್ ೧ ರಂದು ಜಾತ್ರಾ ನಿಮಿತ್ಯವಾಗಿ ದಾನಮ್ಮ ದೇವಿ ಮೂರ್ತಿಗೆ ಬೆಳಿಗ್ಗೆ ೬:೦೦ಗೆ ರುದ್ರಾಭಿಷೇಕ, ತದನಂತರ ೧೦:೦೦ಗೆ ಪಲ್ಲಕ್ಕಿ ಉತ್ಸವ ನಡೆಯಲಿದ್ದು ಸಿಂದಗಿ ರಸ್ತೆಯಿಂದ ಸಕಲ ವಾದ್ಯ ವೈಭವಗಳೊಂದಿಗೆ ದಾನಮ್ಮ ದೇವಿ ದೇವಸ್ಥಾನಕ್ಕೆ ತಲುಪಲಿದೆ.
ಅದೆ ದಿನ ಸಾಯಂಕಾಲ ೬:೦೦ಗೆ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ಜರುಗಲಿದ್ದು, ಅಂದು ನಿರಂತರ ಅನ್ನಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ. ಸಾಯಂಕಾಲ ೫:೦೦ ಗಂಟೆಗೆ ಧರ್ಮಸಭೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಧರ್ಮಸಭೆಯ ಪಾವನ ಸಾನಿಧ್ಯವನ್ನು ಶಿರಶ್ಯಾಡ ಸಂಸ್ಥಾನ ಹಿರೇಮಠದ ಅಭಿನವ ಮುರುಘೇಂದ್ರ ಶಿವಾಚಾರ್ಯರು, ಇಂಡಿ ಸಿದ್ಧಾರೂಢ ಮಠದ ಸ್ವರೂಪಾನಂದ ಮಹಾಸ್ವಾಮಿಗಳು, ಅರ್ಜುಣಗಿಯ ರೇಣುಕ ಶಿವಾಚಾರ್ಯರು ವಹಿಸಲಿದ್ದು, ಕಾರ್ಯಕ್ರಮದ ಘನಅಧ್ಯಕ್ಷತೆಯನ್ನು ವಿಜಯಪುರ ಲೋಕಸಭಾ ಸದಸ್ಯ ರಮೇಶ ಜಿಗಜಿಣಗಿ ವಹಿಸಲಿದ್ದಾರೆ, ಉದ್ಘಾಟನೆಯನ್ನು ಶಾಸಕ ಯಶವಂತರಾಯಗೌಡ ಪಾಟೀಲ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ದಾನಮ್ಮದೇವಿ ದೇವಸ್ಥಾನ ಕಮಿಟಿಯ ಅಧ್ಯಕ್ಷ ಅನಿಲ್‌ಪ್ರಸಾದ್ ಏಳಗಿ ವಹಿಸಲಿದ್ದಾರೆ, ದಾನಮ್ಮ ದೇವಿಯ ಭಾವಚಿತ್ರಕ್ಕೆ ಪೂಜೆಯನ್ನು ಬಿಜೆಪಿ ಮುಖಂಡ ಕಾಸುಗೌಡ ಬಿರಾದಾರ್ ಹಾಗೂ ಜೆಡಿಎಸ್ ಮುಖಂಡ ಬಿ.ಡಿ ಪಾಟೀಲ್ ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಅಣ್ಣಪ್ಪ ಖೈನೂರ, ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಸಿದ್ರಾಮಪ್ಪ ದೇಸಾಯಿ, ರಮೇಶ ಗುತ್ತೇದಾರ, ಜಗದೀಶ ಕ್ಷತ್ರಿ, ಮಲ್ಲಿಕಾರ್ಜುನ ಬಿರಾದಾರ, ಡಿ.ಡಿ. ಮಾಡಗೊಂಡ ಸುರೇಶ ಶಿವುರ, ಶಾಂತು ಶಿರಕನಹಳ್ಳಿ, ಮುದಕು ಕುಂಬಾರ ಸೇರಿದಂತೆ ಇನ್ನಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುತ್ತು ದೇಸಾಯಿ, ಜಗದೀಶ ಕ್ಷತ್ರಿ, ಕಾಸುಗೌಡ ಬಿರಾದಾರ, ಅರವಿಂದ ಹಂಜಗಿ, ರಮೇಶ ರಾಠೋಡ, ಜ್ಞಾನೇಶ ಪವಾರ ಇನ್ನಿತರರು ಇದ್ದರು.

