ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಗುಡ್ಡಾಪೂರ ದಾನಮ್ಮ ದೇವಿ ದರ್ಶನಕ್ಕಾಗಿ ತೆರಳುವ ಅಸಂಖ್ಯಾತ ಪಾದಯಾತ್ರಿಕರಿಗಾಗಿ ಪಟ್ಟಣದ ಸಿದ್ಧಯ್ಯ ಮಲ್ಲಿಕಾರ್ಜುನಮಠ ಸತತ ೨೪ ನೇ ವರ್ಷ ಪ್ರಸಾದ ವ್ಯವಸ್ಥೆ ಕಲ್ಪಿಸುವುದರ ಮೂಲಕ ಹಾಗೂ ಪ್ರಭುದೇವ ಹಿರೇಮಠ (ಹಂದಿಗನೂರ) ಕಳೆದ ೬ ವರ್ಷಗಳಿಂದ ಪ್ರಸಾದ ವ್ಯವಸ್ಥೆ ಕಲ್ಪಿಸುವುದರ ಮೂಲಕ ತಮ್ಮ ಭಕ್ತಿ, ಭಾವ ತೋರುತ್ತಿದ್ದಾರೆ.
ಪಟ್ಟಣದ ಮೂಲಕ ಗುಡ್ಡಾಪೂರಕ್ಕೆ ತೆರಳುವ ಪಾದಯಾತ್ರಿಕರಿಗೆ ಕಳೆದ ೨೪ ವರ್ಷಗಳಿಂದ ಸಾರ್ವಜನಿಕರ ಸಹಕಾರದೊಂದಿಗೆ ಯುವಕ ಸಿದ್ಧಯ್ಯ , ವಿಜಯಪುರ ರಸ್ತೆಗೆ ಹೊಂದಿಕೊಂಡಿರುವ ನಾಡಗೌಡ ಪೆಟ್ರೋಲ್ ಪಂಪ್ ಮುಂದೆ ಈ ಪ್ರಸಾದ ವ್ಯವಸ್ಥೆ ನಡೆಸಿಕೊಂಡು ಬಂದಿದ್ದು, ಈ ಬಾರಿಯು ಛಟ್ಟಿ ಅಮವಾಸ್ಯೆಯಂದು ಜರುಗುವ ಗುಡ್ಡಾಪೂರ ದಾನಮ್ಮದೇವಿ ಜಾತ್ರೆಗೆ ಪಾಲ್ಗೊಳ್ಳಲು ತೆರಳುತ್ತಿರುವ ಪಾದಯಾತ್ರಿಕರಿಗೆ ಪ್ರಸಾದ ವ್ಯವಸ್ಥೆ ಆರಂಭಿಸಿದರು.
ಬೆಳಿಗ್ಗೆಯಿಂದ ರಾತ್ರಿಯವರೆಗೆ ನಿರಂತರವಾಗಿ ಉಪ್ಪಿಟ್ಟು, ಪಲಾವ್, ಬಾಳೆಹಣ್ಣು, ಬಿಸ್ಕೆಟ್, ಚಹಾ. ಬಿಸಿನೀರು ಹಾಗೂ ಔಷಧಿಗಳ ವ್ಯವಸ್ಥೆ ಮಾಡಿದ್ದು, ವಿಶ್ರಾಂತಿ ಪಡೆದುಕೊಳ್ಳುವವರೆಗೆ ವ್ಯವಸ್ಥೆ ಕಲ್ಪಿಸಿದ್ದಾರೆ.
ಈ ಕಾರ್ಯದಲ್ಲಿ ಎ.ಕೆ.ನಾಡಗೌಡ ಪೆಟ್ರೋಲ್ ಪಂಪ್‌ನವರು ಸಹ ಪ್ರತಿವರ್ಷ ಸ್ಥಳಾವಕಾಶ ನೀಡಿ ಔದಾರ್ಯ ಮೆರೆದಿದ್ದಾರೆ.
ಸಿದ್ದಯ್ಯ ಮಲ್ಲಿಕಾರ್ಜುನಮಠ ಇವರ ಜೊತೆ ಈ ಕಾರ್ಯಕ್ಕೆ ಪಟ್ಟಣದ ಬಲ್ಲು ಮೆಟಗಾರ, ಮಂಜು ಕವಳೆ, ಕಾಶೀನಾಥ ಸಂಗಣ್ಣವರ, ಸಂತೋಷ ರಾಮಗೊಂಡ ಕೈ ಜೋಡಿಸಿದ್ದು, ದಾಸೋಹ ನಿರಂತರವಾಗಿ ಸಾಗಲು ಸಹಕಾರವಾಗಿದೆ.
ವಿಜಯಪುರ ರಸ್ತೆಯ ತಮ್ಮ ತೋಟದ ಹತ್ತಿರ ಪ್ರಭುದೇವ ಹಿರೇಮಠ ಅವರು ಸಹ ಪೆಂಡಾಲ್ ಅಳವಡಿಸಿ, ಲತಾ ತಡಪಟ್ಟಿ, ದಾನಮ್ಮ ಸಾರಂಗಮಠ, ಶರಣಯ್ಯ ಹಿರೇಮಠ(ಹಂದಿಗನೂರ) ಹಾಗೂ ವಿಜಯಪುರದ ಮಂಜುಳಾ ಗುರು ದಂಪತಿಗಳ ಸಹಕಾರದ ಮೂಲಕ ಪ್ರಸಾದ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಕಳೆದ ೬ ವರ್ಷಗಳಿಂದ ನಿರಂತರ ಭಕ್ತರ ಸೇವೆಯಲ್ಲಿ ನಿರತರಾಗಿದ್ದಾರೆ

