ವಿಜಯಪುರ: ತಂದೆಯ ಅಭಿವೃದ್ಧಿ ಮೆಚ್ಚಿರುವ ಜನ ನಿರೀಕ್ಷೆಗೂ ಮೀರಿ ಬೆಂಬಲ ನೀಡುತ್ತಿದ್ದು, ಅತೀ ಹೆಚ್ಚು ಮತಗಳಿಂದ ಗೆಲುವು ನಿಶ್ಚಿತ ಎಂದು ಯುವ ನಾಯಕ ರಾಮನಗೌಡ ಪಾಟೀಲ ಯತ್ನಾಳ ವಿಶ್ವಾಸ ವ್ಯಕ್ತಪಡಿಸಿದರು.
ನಗರ ಮತಕ್ಷೇತ್ರ ವ್ಯಾಪ್ತಿಯ ವಾರ್ಡ ನಂ.29, 30 ಹಾಗೂ 24 ರ ಕಾಸಗೇರಿ, ಬಸವನಗರ, ಗೌಡರ ಓಣಿ, ಮಣೂರ ಕಾಲೊನಿ, ಸುಹಾಗ ಕಾಲೊನಿ, ಗಿರೀಶ ನಗರ, ಕುಂಬಾರ ಓಣಿ, ಕಮಾನಖಾನ ಬಜಾರ, ತೇಕಡೆ ಗಲ್ಲಿ, ಯಡವಣ್ಣವರ ಗಲ್ಲಿ ಸೇರಿದಂತೆ ವಿವಿಧೆಡೆ ಪ್ರಚಾರ ನಡೆಸಿ ಅವರು ಮಾತನಾಡಿದರು.
ಕೊರೊನಾ ಮಹಾಮಾರಿಯಿಂದ ಎರಡು ವರ್ಷ ಅಭಿವೃದ್ಧಿ ಕುಂಠಿತಗೊಂಡರೂ, ಉಳಿದ ಕೇವಲ ಮೂರು ವರ್ಷಗಳಲ್ಲಿ ಎರಡೂವರೆ ಸಾವಿರ ಕೋಟಿಗೂ ಹೆಚ್ಚು ಅನುದಾನ ತರುವ ಮೂಲಕ ರಸ್ತೆ ಗಳ ಅಭಿವೃದ್ಧಿ, ಒಳಚರಂಡಿ ನಿರ್ಮಾಣ, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ, ಸಮರ್ಪಕ ಕಸ ವಿಲೇವಾರಿ, ಉದ್ಯಾನಗಳ ಅಭಿವೃದ್ಧಿ, ಓಪನ್ ಜಿಮ್, ಚಿಲ್ಡ್ರನ್ ಪಾರ್ಕ್, ಮಹಾಪುರುಷರ ವೃತ್ತಗಳು ನಿರ್ಮಾಣ ಹಾಗೂ ಮಾರ್ಗಗಳಿಗೆ ಹೆಸರು ನಾಮಕರಣ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಜನರ ಸಮಸ್ಯೆಗೆ ಪರಿಹಾರ ಸಿಕ್ಕಿದ್ದರಿಂದ, ಪ್ರಚಾರಕ್ಕೆ ಬರುವ ಅಗತ್ಯವಿಲ್ಲ ತಮಗೆ ನಮ್ಮ ಬೆಂಬಲ ಎಂದು ಜನ ಮನಸಾರೆ ಹೇಳುತ್ತಿದ್ದಾರೆ. ಇದರಿಂದ ಅತೀ ಹೆಚ್ಚು ಮತಗಳಿಂದ ನಮ್ಮ ಗೆಲುವು ನಿಶ್ಚಿತವಾಗಿದೆ ಎಂದು ಹೇಳಿದರು.
ಅಭಿವೃದ್ಧಿ ಕಾರ್ಯಗಳ ಜೊತೆಗೆ ವಿಮಾನ ನಿಲ್ದಾಣಕ್ಕೆ ಹೆಚ್ಚುವರಿ 250 ಕೋಟಿ ಅನುದಾನ ಸಿಕ್ಕಿರುವುದು, ದ್ರಾಕ್ಷಿ ಬೆಳೆಗಾರರ ಬಹುದಿನಗಳ ಬೇಡಿಕೆಯಾದ ವೈನ್ ಪಾರ್ಕ್ ಮಂಜೂರು, ಉದ್ಯೋಗ ಸೃಷ್ಟಿಸಲು ಜವಳಿ ಪಾರ್ಕ್ ಮಂಜೂರು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಜಿಟಿಟಿಸಿ ಕಾಲೇಜು ಮಂಜೂರು ಹೀಗೆ ಹತ್ತು ಹಲವು ಯೋಜನೆಗಳನ್ನು ಜಿಲ್ಲೆಗೆ ತಂದಿರುವ ಕೀರ್ತಿ ನಮ್ಮ ತಂದೆಗೆ ಸಲ್ಲುತ್ತದೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆ ಸದಸ್ಯರು, ಕಾಲೊನಿ, ಬಡಾವಣೆಯ ಹಿರಿಯ ನಾಗರಿಕರು, ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಮತ್ತಿತರರು ಇದ್ದರು.