ನಿಜವಾದ ’ಉದಯರಶ್ಮಿ’ ಪತ್ರಿಕೆ ವರದಿಯ ನಿರೀಕ್ಷೆ
ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ಸುಕ್ಷೇತ್ರ ಇವಣಗಿ ಗ್ರಾಮದಲ್ಲಿ ಡಿ.೨ ರಂದು ಹಮ್ಮಿಕೊಂಡಿರುವ ಬಸವನಬಾಗೇವಾಡಿ ತಾಲೂಕಿನ ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮನಗೂಳಿ ಪಟ್ಟಣದ ಸಾಹಿತಿ, ಶಿಕ್ಷಕ ಸಿದ್ದರಾಮ ಈರಗೊಂಡಪ್ಪ ಬಿರಾದಾರ ಅವರನ್ನು ಬುಧವಾರ ಸಂಜೆ ಸ್ಥಳೀಯ ಬಸವೇಶ್ವರ ದೇವಸ್ಥಾನ ಆವರಣದಲ್ಲಿರುವ ತಾಲೂಕು ಕಸಾಪ ಕಾರ್ಯಾಲಯದಲ್ಲಿ ಜರುಗಿದ ಆಯ್ಕೆ ಸಮಿತಿಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲೀಕಾರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹತ್ತನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಗೆ ಎಂಟು ಸಾಹಿತಿಗಳು ಅರ್ಜಿ ಸಲ್ಲಿಸಿದ್ದರು. ಎಂಟು ಅರ್ಜಿಗಳನ್ನು ಆಯ್ಕೆ ಸಮಿತಿ ಪರಿಶೀಲನೆ ಮಾಡಿದಾಗ ಸಿದ್ದರಾಮ ಬಿರಾದಾರ ಉಳಿದ ಸಾಹಿತಿಗಳಿಗಿಂತ ಸಾಹಿತಿಕವಾಗಿ, ಶೈಕ್ಷಣಿಕವಾಗಿ ಸೇರಿದಂತೆ ಇತರೇ ವಿಷಯಗಳ ಕುರಿತು ಹೆಚ್ಚು ಪುಸ್ತಕಗಳನ್ನು ರಚಿಸಿದ್ದು ಪರಿಗಣಿಸಿ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಮ್ಮೇಳನ ಸರ್ವಾಧ್ಯಕ್ಷತೆಗೆ ಸಿದ್ದರಾಮ ಬಿರಾದಾರ ಅವರ ಹೆಸರನ್ನು ಹಾಸಿಂಪೀರ ವಾಲೀಕಾರ, ಶಿವು ಮಡಿಕೇಶ್ವರ,ಯಮನಪ್ಪ ಮಿಣಜಗಿ ಸೂಚಿಸಿದರು. ತಾಲೂಕು ಕಸಾಪ ಗೌರವಾಧ್ಯಕ್ಷ ಬಸವರಾಜ ಸೋಮಪುರ, ತಾಲೂಕು ಕಸಾಪ ಅಧ್ಯಕ್ಷ ಶಿವಾನಂದ ಡೋಣೂರ, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಆರ್.ಜಿ.ಅಳ್ಳಗಿ ಅನುಮೋದಿಸಿದರು. ಎಸ್.ಎಲ್.ಓಂಕಾರ, ಬಸವರಾಜ ಮೇಟಿ ಅಂಗೀಕರಿಸಿದರು. ಸಭೆಯಲ್ಲಿ ಆಯ್ಕೆ ಸಮಿತಿ ಸದಸ್ಯರಾದ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಮಾಧವ ಗುಡಿ, ವಕೀಲರಾದ ವೀರಣ್ಣ ಮರ್ತುರ, ರವಿ ರಾಠೋಡ, ಚಂದ್ರಶೇಖರ ಸುಭಾನಪ್ಪರ, ಜಿಲ್ಲಾ ದತ್ತಿ ಸಂಚಾಲಕ ರಾಜೇಸಾಬ ಶಿವನಗುತ್ತಿ, ಎಂ.ಎನ್.ಅಂಗಡಗೇರಿ, ಶಾಂತಾ ಚೌರಿ, ಬಿ.ವ್ಹಿ.ಚಕ್ರಮನಿ ಇತರರು ಇದ್ದರು ಎಂದು ಹಾಸಿಂಪೀರ ವಾಲೀಕಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಜವಾದ ನಿರೀಕ್ಷೆ
ಬುಧವಾರದ ಉದಯರಶ್ಮಿ ದಿನಪತ್ರಿಕೆಯಲ್ಲಿ “ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರ ಪಟ್ಟ ಯಾರ ಮಡಿಲಿಗೆ?” ಎಂಬ ಶೀರ್ಷಿಕೆ ಅಡಿಯಲ್ಲಿ ಬಂದ ವರದಿಯಲ್ಲಿ ಮನಗೂಳಿಯಲ್ಲಿ ಜರುಗಿದ ಒಂಬತ್ತನೇ ಸಮ್ಮೇಳನದಲ್ಲಿ ಸರ್ವಾಧ್ಯಕ್ಷತೆಗೆ ಸಿದ್ದರಾಮ ಬಿರಾದಾರ ಹೆಸರು ಬಂದಾಗ ಇವರು ಸ್ಥಳೀಯರು ಅನ್ನುವ ಕಾರಣ ಮುಂದಿಟ್ಡುಕೊಂಡು ಆಗ ಆಯ್ಕೆ ಮಾಡಿರಲಿಲ್ಲ. ಮುಂದಿನ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮಾತು ಕೇಳಿಬಂದಿತ್ತು. ಇದರ ಬಗ್ಗೆ ವರದಿಯಲ್ಲಿ ಪ್ರಸ್ತಾಪ ಮಾಡಲಾಗಿತ್ತು. ಪತ್ರಿಕೆ ವರದಿಯ ನಿರೀಕ್ಷೆಯಂತೆ ಸಾಹಿತಿ ಸಿದ್ದರಾಮ ಬಿರಾದಾರ ಸರ್ವಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.

