ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಕೊಂಡಗೂಳಿ ಗ್ರಾಮದಲ್ಲಿ ಹವಾಮಾನ ವೈಪರಿತ್ಯದಿಂದ ಹಾಳಾದ ತೊಗರಿ ಬೆಳೆಯ ಜಮೀನುಗಳಿಗೆ ಸಿಂದಗಿ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಎಚ್.ವೈ.ಸಿಂಗೆಗೋಳ ಹಾಗೂ ವಿಮೆ ಕಂಪನಿಯ ರಾಜೇಶ ಭೇಟಿ ನೀಡಿ ವೀಕ್ಷಿಸಿ, ಪರಿಶೀಲಿಸಿದರು.
ಕೊಂಡಗೂಳಿ ರೈತ ಸಮುದಾಯ ನಿನ್ನೆಯಷ್ಟೇ ಗ್ರಾಮದ ತೊಗರಿ ಬೆಳೆ ಹವಾಮಾನ ವೈಪರಿತ್ಯದಿಂದ ಸಂಪೂರ್ಣ ಹಾಳಾದ ಕುರಿತು ಹಾಗೂ ತಕ್ಷಣವೇ ರೈತರಿಗೆ ಬೆಳೆ ಹಾನಿಗೆ ಸಂಪೂರ್ಣ ವಿಮೆ ನೀಡಬೇಕೆಂದು ಆಗ್ರಹಿಸಿ ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದ್ದರು. ರೈತರ ಮನವಿಗೆ ಸ್ಪಂದಿಸಿದ ಸಹಾಯಕ ಕೃಷಿ ನಿರ್ದೇಶಕ ಸಿಂಗೆಗೋಳ ಬುಧವಾರ ಬೆಳಿಗ್ಗೆ ವಿಮೆ ಕಂಪನಿಯ ಸಿಬ್ಬಂದಿಯೊಂದಿಗೆ ಕೊಂಡಗೂಳಿ ಗ್ರಾಮದ ತೊಗರಿ ಬೆಳೆಗಳು ಹಾಳಾದ ಜಮೀನುಗಳಿಗೆ ತೆರಳಿ ವೀಕ್ಷಣೆ ಮಾಡಿ, ಪರಿಶೀಲಿಸಿದರು. ನಂತರ ರೈತರೊಂದಿಗೆ ಮಾತನಾಡಿ, ಬೆಳೆಯ ವಾಸ್ತವಿಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ರೈತರ ನೆರವಿಗೆ ನಿಂತು ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರೈತರಾದ ವೀರಘಂಟಯ್ಯಾ ಗದ್ದಿಗೆಮಠ, ಸಿದ್ದಣ್ಣ ಸಿಂದಗೇರಿ, ಅಪ್ಪಾಸಾಹೇಬ ಬಸರಕೋಡ, ಈರಣ್ಣ ತಾವರಖೇಡ, ಕಾಶೀಲಿಂಗ ಸಿಂದಗೇರಿ, ಜಗದೀಶಗೌಡ ಪಾಟೀಲ, ಪ್ರಭು ಡಿಗ್ಗಾಂವಿ, ಗುರುನಾಥರೆಡ್ಡಿ ಸಿಂದಗೇರಿ, ಚಿನ್ನಾರೆಡ್ಡಿ ಮಲ್ಲಾಬಾದಿ, ಸಿದ್ದನಗೌಡ ಪಾಟೀಲ, ಸಂಪತರೆಡ್ಡಿ ಕೆಂಭಾವಿ, ಶಿವುಕುಮಾರ ಮಲ್ಲಾಬಾದಿ, ತಿಪ್ಪಣ್ಣ ಹೆಬ್ಬಾಳ, ಬಸವರಾಜ ಕರದಾಳಿ, ಚಿದಾನಂದ ಗೊಳಸಾರ ಇದ್ದರು.

