ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಭಾರತದ ಪ್ರತಿಯೊಬ್ಬ ಪ್ರಜೆಗೂ ಸ್ವಾತಂತ್ರ್ಯ ಮತ್ತು ಸಮಾನತೆಯಿಂದ ಬದುಕುವ ಹಕ್ಕನ್ನು ನಮ್ಮ ಸಂವಿಧಾನ ನೀಡಿದೆ. ಅದರ ಜೊತೆಗೆ ಕೆಲವು ಕರ್ತವ್ಯಗಳನ್ನೂ ನೀಡಿದ್ದು ಅವುಗಳ ಪರಿಪಾಲನೆ ಮಾಡುವದು ಪ್ರತಿಯೊಬ್ಬರ ಕರ್ತವ್ಯ ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರವೀಂದ್ರಕುಮಾರ ಕಟ್ಟಿಮನಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಶಿಕ್ಷಣ ಇಲಾಖೆ ಹಾಗೂ ಇತರ ಎಲ್ಲ ಸರಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾವೆಲ್ಲ ಮೂಲಭೂತ ಹಕ್ಕುಗಳಿಗಾಗಿ ಬಡಿದಾಡುತ್ತೇವೆ ವಿನಃ ಮೂಲಭೂತ ಕರ್ತವ್ಯಗಳನ್ನು ಪರಿಪಾಲಿಸುವದಿಲ್ಲ. ಪ್ರತಿಯೊಬ್ಬರೂ ಮೂಲಭೂತ ಕರ್ತವ್ಯಗಳನ್ನು ಚಾಚೂ ತಪ್ಪದೇ ಪರಿಪಾಲಿಸಬೇಕು. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಯಾರೊಬ್ಬರೂ ನಡೆದುಕೊಳ್ಳಬಾರದು ಎಂದರು.
ವಿಶೇಷ ಉಪನ್ಯಾಸ ನೀಡಿದ ಹಿರಿಯ ನ್ಯಾಯವಾದಿ ಎಂ.ಎಚ್.ಹಾಲಣ್ಣವರ ಮಾತನಾಡಿ, ಸಂವಿಧಾನ ಇಲ್ಲದಿದ್ದರೆ ದೇಶವಾಸಿಗಳು ಒಬ್ಬರಿಗೊಬ್ಬರು ಬಡಿದಾಡಿಕೊಂಡು ರಕ್ತದ ಕಾವಲಿ ಹರಿಯುತ್ತಿತ್ತು. ಇಷ್ಟೊಂದು ಪ್ರೀತಿಯಿಂದ ವಾಸಿಸಲು ಸಾಧ್ಯವಾಗುತ್ತಿರಲಿಲ್ಲ. ಇಂತಹ ಸಂವಿಧಾನವನ್ನು ಕೆಲ ರಾಜಕೀಯ ಮುಠ್ಠಾಳರು ತಿದ್ದಲು ಹೊರಟಿದ್ದರು. ಇದನ್ನೆಲ್ಲ ಬಿಟ್ಟು ಸಂವಿಧಾನವನ್ನು ರಕ್ಷಿಸುವ ಕೆಲಸ ನಮ್ಮಿಂದಾಗಬೇಕು ಎಂದರು.
ನ್ಯಾ.ಸಂಘದ ಪ್ರ.ಕಾರ್ಯದರ್ಶಿ ಪಿ.ಬಿ.ಗೌಡರ ಮಾತನಾಡಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿವಮೂರ್ತಿ ಕುಂಬಾರ, ಅಪರ ಸರ್ಕಾರಿ ವಕೀಲ ಎಚ್.ಎಲ್.ಸರೂರ, ನ್ಯಾ.ಸಂಘದ ಉಪಾಧ್ಯಕ್ಷ ಎಚ್.ಜಿ.ನಾಗೋಡ, ನ್ಯಾಯವಾದಿ ಚೇತನ ಶಿವಶಿಂಪಿ ಶಾಲೆಯ ಮುಖ್ಯಗುರು ಎಂ.ಎಸ್.ಕವಡಿಮಟ್ಟಿ, ಕಾನೂನು ಸೇವಾ ಸಮಿತಿಯ ಆಡಳಿತ ಸಹಾಯಕ ಅರವಿಂದ ಕುಂಬಾರ, ದಲಾಯತ ಮಹಾಂತೇಶ ಹಚರೆಡ್ಡಿ, ಶಿಕ್ಷಕರಾದ ಎಂ.ಬಿ.ಪಾಟೀಲ, ಎ.ಎಸ್.ಬಾಗವಾನ, ಅಪ್ಪು ಪವಾರ, ರೇಣುಕಾ ಸಜ್ಜನ, ರಿಯಾನಾ ಬೇಗಂ, ಎಂ.ಎಸ್.ನಾಟಿಕಾರ, ಸುರೇಶ ಬಾಬು, ಶರಣಮ್ಮ ಹಡಲಗೇರಿ ಮತ್ತು ವಿದ್ಯಾರ್ಥಿಗಳು ಇದ್ದರು. ಶಿಕ್ಷಕ ಎಂ.ಎಸ್.ಚಟ್ಟೇರ ನೀರೂಪಿಸಿ ವಂದಿಸಿದರು.

