ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ ಹಾಗೂ ಅನ್ನಭಾಗ್ಯ ಯೋಜನೆಯಡಿ ಜುಲೈ ೨೦೨೬ ನೇ ತಿಂಗಳಿಗೆ ಆಹಾರ ಧಾನ್ಯಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ತಿಳಿಸಿದ್ದಾರೆ. ೧ ರಿಂದ ೩ ಸದಸ್ಯರಿರುವ ಅಂತ್ಯೋದಯ ಅನ್ನ ಯೋಜನೆ ಪಡಿತರ ಚೀಟಿಗೆ ೩೫ ಕೆಜಿ. ಇದರಲ್ಲಿ ೨೧ ಕೆಜಿ ಜೋಳ ಹಾಗೂ ಇನ್ನುಳಿದಂತೆ ೧೪ ಕೆಜಿ ಅಕ್ಕಿ, ಅದರಂತೆ ೪ ಹಾಗೂ ಅದಕ್ಕಿಂತ ಹೆಚ್ಚಿನ ಸದಸ್ಯರಿರುವ ಅಂತ್ಯೋದಯ ಅನ್ನ ಪಡಿತರ ಚೀಟಿಗೆ ಪ್ರತಿ ಸದಸ್ಯರಿಗೆ ೧೦ ಕೆಜಿಯಂತೆ ಲೆಕ್ಕಾಚಾರದಡಿ ೨೧ ಕೆಜಿ ಜೋಳ ಮತ್ತು ಇನ್ನುಳಿದಂತೆ ಅಕ್ಕಿಯನ್ನು ಹಂಚಿಕೆ ನೀಡಲಾಗಿದೆ ಎಂದವರು ತಿಳಿಸಿದ್ದಾರೆ. ಬಿಪಿಎಲ್ ಪಡಿತರ ಚೀಟಿಯ ಪ್ರತಿ ಸದಸ್ಯರಿಗೂ ೩ ಕೆಜಿ ಜೋಳ ಹಾಗೂ ೭ ಕೆಜಿ ಅಕ್ಕಿಯಂತೆ ಹಂಚಿಕೆ ನೀಡಲಾಗಿರುತ್ತದೆ. ಪಡಿತರ ಚೀಟಿದಾರರು ಆಯಾ ನ್ಯಾಯ ಬೆಲೆ ಅಂಗಡಿಯಲ್ಲಿ ಬಯೋಮೆಟ್ರಿಕ್ ನೀಡಿ ಪಡಿತರ ವಸ್ತುಗಳನ್ನು ಪಡೆಯಬಹುದಾಗಿದೆ.
ಸಾರ್ವಜನಿಕ ವಿತರಣಾ ಪದ್ಧತಿಯಡಿ ಹಂಚಿಕೆ ಮಾಡಲಾಗಿರುವ ಆಹಾರ ಧಾನ್ಯಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡದೇ ಸದುದ್ದೇಶಕ್ಕಾಗಿ ಬಳಕೆ ಮಾಡಿಕೊಳ್ಳಲು ಈ ಮೂಲಕ ಸೂಚಿಸಲಾಗಿದೆ. ಒಂದು ವೇಳೆ ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂತಹ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗುವುದೆಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.
