ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸ್ವತಂತ್ರ ದೊರೆತ ಬಳಿಕ ನಮ್ಮ ಆಡಳಿತವನ್ನು ಹೇಗೆ ಮುನ್ನೆಡೆಸಬೇಕು ಎಂಬ ವಿಚಾರವಾಗಿ ಸಂವಿಧಾನ ರಚಿಸಲು ಒಂದು ಕರಡು ಸಮಿತಿಯನ್ನು ರಚನೆ ಮಾಡಲಾಯಿತು. ಅದರ ಅದ್ಯಕ್ಷರನ್ನಾಗಿ ಡಾ.ಬಿ.ಆರ್.ಅಂಬೇಡ್ಕರರನ್ನು ನೇಮಕ ಮಾಡಿ ಹಲವಾರು ದೇಶಗಳ ಗ್ರಂಥಗಳನ್ನು ಅಧ್ಯಯನ ಮಾಡಿ ಸಂವಿಧಾನ ರಚಿಸಿ ಕಟ್ಟಕಡೆಯ ವ್ಯಕ್ತಿಯಿಂದ ಉಚ್ಚ ವ್ಯಕ್ತಿಯವರೆಗೆ ನ್ಯಾಯ ಸಮಾನತೆಯಿಂದ ಅಧಿಕಾರ ನೀಡಿದ್ದು ಒಂದು ಧರ್ಮ ಗ್ರಂಥವೆಂದರೆ ಅದುವೇ ಧರ್ಮಗ್ರಂಥವೆಂದು ಹೇಳಿದರೂ ತಪ್ಪಾಗದು ಎಂದು ತಾಪಂ ಇಒ ರಾಮು ಅಗ್ನಿ ಹೇಳಿದರು.
ಪಟ್ಟಣದ ಡಾ.ಅಂಬೇಡ್ಕರ ವೃತ್ತದಲ್ಲಿ ತಾಲೂಕಾಡಳಿತ ವತಿಯಿಂದ ಸಂವಿಧಾನ ದಿನದ ನಿಮಿತ್ತ ಹಮ್ಮಿಕೊಂಡ ಸಂವಿಧಾನ ಪಿಠೀಕೆಯನ್ನು ತಾಪಂ ಇಒ ರಾಮು ಅಗ್ನಿ ಬೋಧಿಸಿ ಮಾತನಾಡಿದರು.
ಭಾರತದ ಪ್ರಜೆಗಳಾದ ನಾವು ಭಾರತವನ್ನು ಒಂದು ಸಾರ್ವಭೌಮ ಸಮಾಜವಾದಿ ಸರ್ವಧರ್ಮ ಸಮಭಾವದ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರಚಿಸಲು ಮತ್ತು ಸಮಸ್ತ ನಾಗರಿಕರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ, ವಿಚಾರ, ಅಭಿವ್ಯಕ್ತಿ, ವಿಶ್ವಾಸ, ಧರ್ಮಶ್ರದ್ಧೆ ಮತ್ತು ಉಪಾಸನಾ ಸ್ವಾತಂತ್ರ‍್ಯ, ಸ್ಥಾನಮಾನ ಹಾಗೂ ಅವಕಾಶ ಸಮಾನತೆ ದೊರೆಯುವಂತೆ ಮಾಡಲು ಮತ್ತು ವ್ಯಕ್ತಿ ಗೌರವವನ್ನು ರಾಷ್ಟ್ರದ ಏಕತೆಯನ್ನು ಹಾಗೂ ಅಖಂಡತೆಯನ್ನು ಸುನಿಶ್ಚಿತಗೊಳಿಸಿ ಅವರಲ್ಲ ಭ್ರಾತೃಭಾವನೆಯನ್ನು ವೃದ್ಧಿಗೊಳಿಸಲು ಶೃದ್ಧಾಪೂರ್ವಕ ಸಂಕಲ್ಪ ಮಾಡಿದವರಾಗಿ ನಮ್ಮ ಸಂವಿಧಾನ ಸಭೆಯಲ್ಲಿ ನ.೨೬, ೧೯೪೯ರಂದು ಸಂವಿಧಾನವನ್ನು ಅಂಗೀಕರಿಸಿ, ಅಧಿನಿಯಮಿಸಿ ಅರ್ಪಿಸಿಕೊಂಡಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಗ್ರೇಡ್ ೨ ತಹಶೀಲ್ದಾರ್ ಇಂದ್ರಾಭಾಯಿ ಬಳಗಾನೂರ, ಸಮಾಜ ಕಲ್ಯಾಣ ಅಧಿಕಾರಿ ಭವಾನಿ ಪಾಟೀಲ, ಕೃಷಿ ಅಧಿಕಾರಿ ಡಾ.ಎಚ್.ವೈ.ಸಿಂಗೇಗೋಳ, ಪಿ.ಎಂ.ಜಿ.ಎಸ್.ವೈ ಎಇಇ ಜಿ.ವೈ.ಮುರಾಳ, ಸಿಡಿಪಿಓ ಶಂಭುಲಿಂಗ ಹಿರೇಮಠ, ಎಸಿಡಿಪಿಓ ಎಸ್.ಎನ್.ಕೋರವಾರ, ಅರಣ್ಯ ಅಧಿಕಾರಿ ಮಲಕಣ್ಣನವರ, ಪುರಸಭೆ ಉಪಾಧ್ಯಕ್ಷ ರಾಜಣ್ಣಿ ನಾರಾಯಣಕರ, ಮುಖ್ಯಾಧಿಕಾರಿ ಎಸ್.ರಾಜಶೇಖರ, ಕಂದಾಯ ನಿರೀಕ್ಷ ಐ.ಎ.ಮಕಾನದಾರ, ದ.ಸಂ.ಸ ಜಿಲ್ಲಾ ಸಂಚಾಲಕ ವೈ.ಸಿ.ಮಯೂರ, ಆರ್.ಎಸ್.ಬನ್ನೇಟ್ಟಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಇದ್ದರು

