ಸಿಂದಗಿಯಲ್ಲಿ ವಿಜ್ಞಾನ ಮೇಳ ಕಾರ್ಯಕ್ರಮ ಉದ್ಘಾಟಿಸಿದ ಮಕ್ಕಳ ಹಿರಿಯ ಸಾಹಿತಿ ಹ. ಮ. ಪೂಜಾರ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳ ಬಗ್ಗೆ ಕುತೂಹಲ ಮೂಡಿಸುವಲ್ಲಿ ವಿಜ್ಞಾನ ಮೇಳಗಳು ಹೆಚ್ಚು ಪ್ರಯೋಜನಕಾರಿಯಾಗಿವೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಂಬುನಾಥ ಕಂಚಾಣಿ ಹೇಳಿದರು.
ಸಿಂದಗಿ ಪಟ್ಟಣದ ವಿವೇಕ್ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆ ಮತ್ತು ವಿಜಯಪುರ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ ಇವುಗಳ ಸಹಯೋಗದಲ್ಲಿ ನಡೆದ ವಿಜ್ಞಾನ ಮೇಳದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವವನ್ನು ಜಾಗೃತಗೊಳಿಸುವುದು, ಪ್ರಾಯೋಗಿಕ ಕಲಿಕೆ, ಉನ್ನತ ಶಿಕ್ಷಣ ಹಾಗೂ ಸಾಧನೆಗಳತ್ತ ಪ್ರೇರಣೆ ನೀಡುವುದು ಮೇಳದ ಮುಖ್ಯ ಉದ್ದೇಶವಾಗಬೇಕು ಎಂದರು.
ಈ ವೇಳೆ ಮಕ್ಕಳ ಹಿರಿಯ ಸಾಹಿತಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹ.ಮ.ಪೂಜಾರ ಉದ್ಘಾಟಿಸಿ ಮಾತನಾಡಿ, ವಿಜ್ಞಾನ ಮೇಳಗಳು ಮಕ್ಕಳಲ್ಲಿ ಹುದುಗಿಕೊಂಡಿರುವ ಸೃಜನಾತ್ಮಕ ಶಕ್ತಿಯನ್ನು ಹೊರಗಡೆ ಹಾಕುವಲ್ಲಿ ಹೆಚ್ಚು ಉಪಯುಕ್ತವಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಪ್ರತಿಭೆ ಇರುತ್ತದೆ ಅದನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ ಮಾಡಿದರೆ ಅವರಿಗೆ ಭವಿಷ್ಯ ರೂಪಿಸಿಕೊಡಲು ಸಹಕಾರಿಯಾಗಲಿದೆ ಶಾಲಾ ಕಾಲೇಜುಗಳು ಆ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದರೆ ಮಕ್ಕಳ ಭವಿಷ್ಯವನ್ನು ರೂಪಿಸಬಹುದಾಗಿದೆ ಎಂದರು.
ಸಂಸ್ಥೆಯ ಮಾರ್ಗದರ್ಶಕ ಪಟ್ಟಣದ ಎಚ್.ಜಿ.ಪಪೂ ಕಾಲೇಜಿನ ಪ್ರಾಚಾರ್ಯಎ.ಆರ್. ಹೆಗ್ಗನದೊಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷೆ ನೀಲಮ್ಮ ಹೆಗ್ಗನದೊಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಪ್ರಾಚಾರ್ಯ ಶಾನಿಮೋಲ್ ರಾಬಿನ್ ಇದ್ದರು.
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ರಾಬಿನ್, ಶಿವಕುಮಾರ ಶಿವಶಂಪಿಗೇರ ಸೇರಿದಂತೆ ಪಾಲಕರು, ವಿವಿಧ ಶಾಲಾ ಮಕ್ಕಳು, ಶಿಕ್ಷಕರು ಹಾಜರಿದ್ದರು.
ಗೌರವ ಸನ್ಮಾನ
ಇದೇ ಸಂದರ್ಭದಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದವರು ನೀಡಿದ ಧರೆಗೆ ದೊಡ್ಡವರು ಪ್ರಶಸ್ತಿಗೆ ಭಾಜನರಾದ ಹ.ಮ.ಪೂಜಾರ ಮತ್ತು ಜಂಬುನಾಥ ಕಂಚಾಣಿ ಅವರಿಗೆ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮದ ಅಧ್ಯಕ್ಷ ಎ.ಆರ್ ಹೆಗ್ಗನದೊಡ್ಡಿ ಗೌರವಿಸಿ, ಸನ್ಮಾನಿಸಿದರು.

