ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಭಕ್ತಿಯಲ್ಲಿ ಮೈಮರೆತ ವಿವಾಹಿತನ ಧೋತರಕ್ಕೆ ಬೆಂಕಿ ಹತ್ತಿ ಗಂಭೀರ ಗಾಯವಾದ ಘಟನೆ ತಾಲೂಕಿನ ಶಿರೋಳ ಗ್ರಾಮದಲ್ಲಿ ನಡೆದಿದೆ.
ಗಾಯಾಳು ಶರಣಗೌಡ ಅಗಸಬಾಳ ಎಂದು ತಿಳಿದು ಬಂದಿದೆ. ಗ್ರಾಮದ ದ್ಯಾಮಣ್ಣ ಮುತ್ಯಾನ ಕಟ್ಟೆಯಲ್ಲಿ ಭಕ್ತರಿಂದ ರವಿವಾರ ದೇವರಿಗೆ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಭಕ್ತಿಯಲ್ಲಿ ಮೈಮರೆತ ಶರಣಗೌಡ ನಮಸ್ಕರಿಸುವ ಸಂದರ್ಭ ಆತನ ಧೋತರಕ್ಕೆ ತಗುಲಿದ ಬೆಂಕಿ ಚಪ್ಪೆ, ಕಾಲು ಮತ್ತು ಕೈಗಳ ಕೆಲ ಭಾಗಕ್ಕೆ ಆವರಿಸಿಕೊಳ್ಳುತ್ತಿದ್ದಂತೆ ಸೇರಿದ್ದ ಜನ ಬೆಂಕಿಯನ್ನು ನಂದಿಸಿ ಆತನನ್ನು ಕೂಡಲೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದೃಷ್ಟವಶಾತ್ ಗಾಯಾಳು ಪ್ರಾಣಾಪಾಯದಿಂದ ಪಾರಾಗಿದ್ದು, ಗಂಭೀರವಾದ ಗಾಯಗಳಾಗಿರುವದರಿಂದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

