ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ನ್ಯಾಯದಿಂದ ವಂಚಿತರಾಗುತ್ತಿರುವ ಮಹಿಳೆಯರು, ಹಿಂದುಳಿದ ವರ್ಗದವರು ಸೇರಿದಂತೆ ಬಡವರಿಗೆ ಕಾನೂನಿನ ನೆರವು ನೀಡುವ ಉದ್ದೇಶದಿಂದ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರವನ್ನು ಪ್ರಾರಂಭಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರವೀಂದ್ರಕುಮಾರ ಕಟ್ಟಿಮನಿ ಕರೆ ನೀಡಿದರು.
ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಫಂಕ್ಷನ್ ಹಾಲ್ ನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಸಮಾಜ ಕಲ್ಯಾಣ ಇಲಾಖೆ ಹಾಗೂ ಇತರ ಎಲ್ಲ ಸರಕಾರಿ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನ್ಯಾಯಾಲಯಗಳು, ನ್ಯಾಯ ಮಂಡಳಿಗಳು ಸೇರಿದಂತೆ ವಿವಿಧ ಪ್ರಾಧಿಕಾರಗಳಲ್ಲಿರುವ ಪ್ರಕರಣಗಳನ್ನು ನಡೆಸಲು ನ್ಯಾಯವಾದಿಗಳ ಸಹಾಯ ಅವಶ್ಯ. ವಕೀಲರ ನೇಮಕ ಮಾಡಿಕೊಳ್ಳಲು ಆರ್ಥಿಕವಾಗಿ ದುರ್ಬಲರಿದ್ದಲ್ಲಿ ಅಂಥವರು ಕಾನೂನು ಸೇವಾ ಪ್ರಾಧಿಕಾರದ ಸೇವೆ ಪಡೆಯಬಹುದು. ಈ ಸೇವೆ ಪಡೆಯಲು ಪ್ರತೀ ನ್ಯಾಯಾಲಯಗಳಲ್ಲಿ ಕಾನೂನು ಸೇವಾ ಪ್ರಾಧಿಕಾರದ ಕಚೇರಿಗೆ ಬೇಟಿ ನೀಡಿ ಸೇವೆ ಪಡೆಯಬಹುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು, ಮಹಿಳೆಯರು, ವಿಪತ್ತಿಗೆ ಒಳಗಾದವರು, ಮಾನಸಿಕ ಅಸ್ವಸ್ಥರು, ವಾರ್ಷಿಕ ಆದಾಯ ಒಂದು ಲಕ್ಷಕ್ಕಿಂತ ಕಡಿಮೆ ಇರುವವರು ಈ ಸೇವೆ ಪಡೆಯಬಹುದು ಎಂದರು.
ವಿಶೇಶ ಉಪನ್ಯಾಸಕರಾಗಿ ನ್ಯಾಯವಾದಿ ಎನ್.ಆರ್.ಮೊಕಾಶಿ ಮಾತನಾಡಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ನ್ಯಾಯದಿಂದ ವಂಚಿತರಾಗಬಾರದು ಅಂತಾ ಸಂವಿಧಾನದಲ್ಲಿ ತಿದ್ದುಪಡಿ ಮಾಡುವ ಮೂಲಕ ಕಾನೂನು ಸೇವಾ ಪ್ರಾಧಿಕಾರ ರಚಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಲು ಸಾರ್ವಜನಿಕರು ಮುಂದಾಗಬೇಕು ಎಂದರು.
ನ್ಯಾಯವಾದಿಗಳ ಸಂಘದ ಪ್ರ.ಕಾರ್ಯದರ್ಶಿ ಪಿ.ಬಿ.ಗೌಡರ ಮಾತನಾಡಿ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಾರ್ವಜನಿಕರಲ್ಲಿ ಕಾನೂನಿನ ಬಗ್ಗೆ ಸಾಕಷ್ಟು ತಿಳುವಳಿಕೆ ನೀಡಲಾಗುತ್ತಿದೆ. ಪ್ರತೀ ಮನುಷ್ಯನಿಗೆ ಹುಟ್ಟಿನಿಂದ ಶುರುವಾಗುವ ಕಾನೂನು ಅವನ ಅಂತ್ಯದವರೆಗೂ ಜೊತೆಗಿರುತ್ತದೆ. ಕಾನೂನುಗಳನ್ನು ತಿಳಿದುಕೊಂಡಲ್ಲಿ ಕೆಲಸ ಕಾರ್ಯಗಳಿಗೆ ಅಲೆದಾಡುವ ಪರಿಸ್ಥಿತಿ ಎದುರಾಗುವದಿಲ್ಲ ಎಂದರು.
ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಸಂಪತ್ತಕುಮಾರ ಬಳೂಲಗಿಡದ, ತಹಶೀಲ್ದಾರ ಕಚೇರಿಯ ಶಿರಸ್ತೆದಾರ ಎಂ.ಎ.ಬಾಗೇವಾಡಿ, ತಾಲೂಕು ಪಂಚಾಯತ ಮ್ಯಾನೇಜರ ನಿರ್ಮಲಾ ತೋಟದ, ನ್ಯಾ.ಸಂಘದ ಸಹ ಕಾರ್ಯದರ್ಶಿ ಬಿ.ಪಿ.ಮ್ಯಾಗೇರಿ, ನ್ಯಾಯವಾದಿ ಚೇತನ ಶಿವಶಿಂಪಿ, ನ್ಯಾಯಾಲಯದ ಸಿಬ್ಬಂದಿಗಳಾದ ಅರವಿಂದ ಕುಂಬಾರ, ಮಹಾಂತೇಶ ಹಚರೆಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯ ನಿರ್ದೇಶಕಿ ಬಿ.ಜಿ.ಮಠ, ವಾರ್ಡನ್ ಎಸ್.ಆರ್.ಬಿರಾದಾರ ಸೇರಿದಂತೆ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಶಿಕ್ಷಕ ಹಾಗೂ ಕಲಾವಿದ ಟಿ.ಡಿ.ಲಮಾಣಿ ಕಾರ್ಯಕ್ರಮ ನಿರ್ವಹಿಸಿದರು.

