ಜಿಲ್ಲಾಧಿಕಾರಿಗಳ ಅನಿರೀಕ್ಷಿತ ಭೇಟಿ: ಮತದಾರರ ಪಟ್ಟಿ ಖುದ್ದು ಪರಿಶೀಲನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ವರ್ಗಾವಣೆ, ಹೆಸರು ತೆಗೆದು ಹಾಕುವ ಕುರಿತ ನವೆಂಬರ್ ೯, ೧೦, ಹಾಗೂ ೨೩ ಮತ್ತು ೨೪ರಂದು ಜಿಲ್ಲೆಯಲ್ಲಿ ನಾಲ್ಕು ದಿನಗಳ ಕಾಲ ವಿಶೇಷ ಅಭಿಯಾನ ಪ್ರಕ್ರಿಯೆ ನಡೆದಿದ್ದು ಈ ವಿಶೇಷ ಅಭಿಯಾನ ದಿನಗಳಂದು ಎಲ್ಲ ಬಿಎಲ್ ಒಗಳು ತಮ್ಮ ಮತಗಟ್ಟೆಗಳಲ್ಲಿ ಉಪಸ್ಥಿತರಿರುವರು. ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆಯೂ ಸೇರಿದಂತೆ ಅಗತ್ಯ ಮಾಹಿತಿ ಅವಲೋಕಿಸಿಕೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ನಿಮಿತ್ಯ ನಗರದ ಟ್ರೇಜರಿ ಕಾಲೋನಿಯ ಮತಗಟ್ಟೆ ಸಂಖ್ಯೆ ೪೦ ರಿಂದ ೪೨ಕ್ಕೆ, ತಿಕೋಟ ತಾಲೂಕಿನ ತೊರವಿಯ ಮತಗಟ್ಟೆ ಸಂಖ್ಯೆ ೯೨ ರಿಂದ ೯೭ ಹಾಗೂ ತಾಜಪೂರ ಗ್ರಾಮದಲ್ಲಿ ಬರುವ ಮತಗಟ್ಟೆ ಸಂಖ್ಯೆ ೧೦೯ ರಿಂದ ೧೧೨ಕ್ಕೆ ಅನಿರೀಕ್ಷಿತ ಭೇಟಿ ನೀಡಿ, ಪ್ರಗತಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ವಿಜಯಪುರದ ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ, ತಹಶೀಲ್ದಾರರು, ಮತಗಟ್ಟೆ ಅಧಿಕಾರಿಗಳು ಉಪಸ್ಥಿತರಿದ್ದರು.

