ರಾಜ್ಯದ ಭೂಮಿಯನ್ನು ವಕ್ಫ್ ಆಸ್ತಿಯನ್ನಾಗಿ ಪರಿವರ್ತಿಸುವ ಗುರಿ ಹೊಂದಿರುವ ಸಿಎಂ | ಬಿಜೆಪಿ ಗಂಭೀರ ಆರೋಪ
ಉದಯರಶ್ಮಿ ದಿನಪತ್ರಿಕೆ
ಬೆಂಗಳೂರು: ರಾಜ್ಯ ಸರ್ಕಾರ ಎಫ್‌ಐಆರ್ ದಾಖಲಿಸುವ ಮೂಲಕ ರೈತರ ಪರ ಧ್ವನಿಯನ್ನು ಅಡಗಿಸಲು ಬಯಸುತ್ತಿದೆ ಎಂದು ಬಿಜೆಪಿ ಶನಿವಾರ ಆರೋಪ ಮಾಡಿದೆ.
ರಾಜ್ಯದ ಭೂಮಿಯನ್ನು ವಕ್ಫ್ ಆಸ್ತಿಯನ್ನಾಗಿ ಪರಿವರ್ತಿಸುವ ಗುರಿ ಹೊಂದಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ರೈತರ ಪರ ಧ್ವನಿ ಎತ್ತುವವರನ್ನು ಗುರಿಯಾಗಿಸಿ ಸುಳ್ಳು ದೂರು ದಾಖಲಿಸಿ ಬೆದರಿಕೆ ಹಾಕುತ್ತಿದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಶನಿವಾರ ಆರೋಪಿಸಿದರು.
ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರ ಹೇಳಿಕೆ ವಿರುದ್ಧ ಎಫ್ ಐಆರ್ ದಾಖಲಿಸುವುದು ಪ್ರಜಾಪ್ರಭುತ್ವ ವಿರೋಧಿ ಮತ್ತು ರೈತರನ್ನು ಭಯ ಪಡಿಸುವ ಕ್ರಮವಾಗಿದೆ. ಈ ಘಟನೆಯನ್ನು ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡಲು ಬಳಸಿಕೊಂಡಿದೆ ಎಂದು ಅವರು ವಾಗ್ದಾಳಿ ನಡೆಸಿದರು.
ಕರ್ನಾಟಕದಲ್ಲಿ ಬಿಜೆಪಿ ಯಾವುದೇ ಸಂದರ್ಭದಲ್ಲೂ ಸುಳ್ಳು ದೂರುಗಳು ಮತ್ತು ಬೆದರಿಕೆ ತಂತ್ರಗಳಿಗೆ ಬಗ್ಗುವುದಿಲ್ಲ, ಈಗಾಗಲೇ ಸಾಲದ ಹೊರೆಗೆ ಸಿಲುಕಿರುವ ನಮ್ಮ ರೈತರ ಜೀವನಾಧಾರವಾಗಿರುವ ಭೂಮಿಯನ್ನು ವಕ್ಫ್ ಅಧಿಕಾರಿಗಳಿಗೆ ಬಿಟ್ಟುಕೊಡಲು ಒತ್ತಾಯಿಸಿದರೆ ಅವರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದರು.

ಸುಳ್ಳು ಸುದ್ದಿ: ಸಂಸದ ತೇಜಸ್ವಿ ಸೂರ್ಯ ವಿರುದ್ಧ FIR
ಬೆಂಗಳೂರು: ರೈತನ ಆತ್ಮಹತ್ಯೆಗೂ ವಕ್ಫ್ ಬೋರ್ಡ್‌ನ ಭೂವಿವಾದಕ್ಕೂ ಸಂಬಂಧ ಕಲ್ಪಿಸಿ ಸುಳ್ಳು ಸುದ್ದಿ ಹಬ್ಬಿಸಿದ ಆರೋಪದ ಮೇಲೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹಾಗೂ ಕೆಲವು ಕನ್ನಡ ನ್ಯೂಸ್ ಪೋರ್ಟಲ್‌ಗಳ ಸಂಪಾದಕರ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ನಿನ್ನೆ ತಮ್ಮ ಎಕ್ಸ್ ಖಾತೆಯಲ್ಲಿ ಸುದ್ದಿ ಪೋರ್ಟಲ್‌ಗಳ ಸುದ್ದಿಯನ್ನು ಹಂಚಿಕೊಂಡ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ, ಹಾವೇರಿ ಜಿಲ್ಲೆಯ ರೈತರೊಬ್ಬರು ತಮ್ಮ ಭೂಮಿಯನ್ನು ವಕ್ಪ್ ಮಂಡಳಿ ಸ್ವಾಧೀನಪಡಿಸಿಕೊಂಡಿದ್ದಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.
ಅಲ್ಪಸಂಖ್ಯಾತ ವರ್ಗದವರನ್ನು ಖುಷಿಪಡಿಸುವ ತರಾತುರಿಯಲ್ಲಿ, ಸಿಎಂ ಸಿದ್ದರಾಮಯ್ಯ, ಸಚಿವ ಜಮೀರ್ ಅಹ್ಮದ್ ಕರ್ನಾಟಕದಲ್ಲಿ ದುರಂತ ತಂದೊಡ್ಡಿದ್ದಾರೆ. ದಿನಗಳೆದಂತೆ ರೈತರು, ಹಿಂದೂಗಳ ಬದುಕು ದುಸ್ತರವಾಗುತ್ತಿದೆ ಎಂದು ತೇಜಸ್ವಿ ಸೂರ್ಯ ಆರೋಪಿಸಿದ್ದರು.

