ರೈತರು-ಸಕ್ಕರೆ ಕಾರ್ಖಾನೆ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸಭೆ | ಜಿಲ್ಲಾಧಿಕಾರಿ ಟಿ.ಭೂಬಾಲನ್ ಕಟ್ಟುನಿಟ್ಟಿನ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿರುವ ಎಲ್ಲ ಸಕ್ಕರೆ ಕಾರ್ಖಾನೆಗಳು ಪ್ರಸಕ್ತ ಸಾಲಿನ ಹಂಗಾಮಿಗೆ ಸರ್ಕಾರದ ಆದೇಶದಂತೆ ಕಬ್ಬು ನುರಿಸುವ ಕಾರ್ಯ ಆರಂಭಿಸಿದ ಸಂದರ್ಭದಲ್ಲಿ ಕಬ್ಬು ಪೂರೈಸಿದ ರೈತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಶುಕ್ರವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಕಬ್ಬು ಪೂರೈಸಿದ ರೈತರಿಗೆ ಸಕ್ಕರೆ ಕಾರ್ಖಾನೆಗಳು ನಿಗದಿತ ಅವಧಿಯಲ್ಲಿ ಹಣ ಸಂದಾಯ ಮಾಡಬೇಕು ಯಾವುದೇ ಕಾರಣಕ್ಕೂ ಸಕ್ಕರೆ ಕಾರ್ಖಾನೆಗಳು ಯಾವುದೇ ರೈತರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳು ತೂಕದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಸಿಸಿಟಿವಿ ನಿಗಾವಣೆಯಲ್ಲಿ ತೂಕ ಮಾಡುವ ಕಾರ್ಯ ನಿರ್ವಹಣೆ ಮಾಡಬೇಕು. ಪ್ರತಿ ವರ್ಷ ಕಾರ್ಖಾನೆಗಳಿಗೆ ಭೇಟಿ ನೀಡಿ ವಾಯುಮಾಲಿನ್ಯ ಮತ್ತು ನೈರ್ಮಲ್ಯ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದ ಅವರು, ಸಕ್ಕರೆ ಕಾರ್ಖಾನೆಗಳು ಕೊಳಚೆ ನೀರು ಬಿಡದಂತೆ ನೋಡಿಕೊಂಡು ಮಾಲಿನ್ಯವಾಗದಂತೆ ನಿಗಾ ವಹಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಲ್ಲಿ ಅಳವಡಿಸಿಕೊಂಡಿರುವ ಡಿಜಿಟಲ್ ತೂಕದ ಯಂತ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಕುರಿತು ಸಕ್ಕರೆ ಕಾರ್ಖಾನೆಗಳಿಗೆ ಭೇಟಿ ನೀಡಿ ತೂಕ ಅಳತೆ ಮಾಪನ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಉಪವಿಭಾಗಾಧಿಕಾರಿಗಳು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ದೀಢೀರವಾಗಿ ಕಾರ್ಖಾನೆಗಳಿಗೆ ಭೇಟಿ ನೀಡಿ ಕಬ್ಬು ನುರಿಸುವ ಕಾರ್ಖಾನೆಗಳು ಎಲ್ಲ ನಿಯಮಗಳನು ಪಾಲಿಸುತ್ತಿರುವ ಕುರಿತು ಪರಿಶೀಲನೆ ನಡೆಸಬೇಕು. ತೂಕದ ಯಂತ್ರ, ಸ್ಟ್ಯಾಪಿಂಗ್ ಕುರಿತು ದೀಢಿರವಾಗಿ ಭೇಟಿ ನೀಡಿ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚಿಸಿದರು.
ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ವಿಜಯಪುರ ಉಪವಿಭಾಗಾಧಿಕಾರಿ ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ಇಂಡಿ ಉಪವಿಭಾಗಾಧಿಕಾರಿ ಆಬೀದ ಗದ್ಯಾಳ, ಆಹಾರ ಮತ್ತು ನಾಗರಿಕರ ಸಬರಾಜು ಇಲಾಖೆ ಉಪನಿರ್ದೇಶಕ ವಿನಯಕುಮಾರ ಪಾಟೀಲ, ಆಹಾರ ಇಲಾಖೆ ಶಿರಸ್ತೇದಾರ ಅಮರೇಶ ತಾಂಡೂರ ಸೇರಿದಂತೆ ವಿವಿಧ ಅಧಿಕಾರಿಗಳು, ಜಿಲ್ಲೆಯ ವಿವಿಧ ರೈತ ಮುಖಂಡರಾದ ಸುಭಾಷ ಶಿರಬೂರ, ಸಂಗಮೇಶ ಸಗರ, ಸೋಮು ಬಿರಾದಾರ, ರಾಮನಗೌಡ ಪಾಟೀಲ, ಶಾನೂರ ನಂದರಗಿ, ಹಣಮಂತ ಬ್ಯಾಡಗಿ, ಧರೆಪ್ಪ ಸೊರಡಿ, ಜಕರಾಯ ಪೂಜಾರಿ, ಕುಲಕರ್ಣಿ, ಸೇರಿದಂತೆ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ವ್ಯವಸ್ಥಾಪಕ ನಿರ್ದೇಶಕರು ಉಪಸ್ಥಿತರಿದ್ದರು.

ರೈತರಿಂದ ವಿವಿಧ ಸಲಹೆಗಳು
ಕಬ್ಬು ನುರಿಸುವ ಮುಂಚೆ ಸಭೆ ನಡೆಸಿ, ರೈತರ ಅಹವಾಲುಗಳನ್ನು ಆಲಿಸಬೇಕು. ಇತ್ತಿಚೆಗೆ ಕಬ್ಬು ಬೆಳೆಗಾರರು ಕಡಿಮೆಯಾಗಿರುವುದರಿಂದ ರೈತರ ಸಹಾಯಕ್ಕೆ ಮುಂದಾಗಬೇಕು. ಕೆಲವು ಸಕ್ಕರೆ ಕಾರ್ಖಾನೆಗಳಿಂದ ಕಲುಷಿತ ನೀರು ಹೊರಗಡೆ ಬಿಡುಗಡೆಗೊಳಿಸುವುದರಿಂದ ಮಾಲಿನ್ಯ ಉಂಟಾಗಿ ಜಲಚರಗಳ ದುಷ್ಟರಿಣಾಮ ಬೀರುತ್ತಿದೆ. ಈ ಕುರಿತು ಮುನ್ನ್ನೆಚ್ಚರಿಕಾ ಕ್ರಮ ವಹಿಸಬೇಕು. ಸಕ್ಕರೆ ಹಾಗೂ ಕಬ್ಬುಗಳನ್ನು ಒಂದೇ ತೂಕದ ಯಂತ್ರದಿಂದ ತೂಕ ಮಾಡಬೇಕು. ಎಫ್‌ಆರ್‌ಪಿ ದರಕ್ಕಿಂತ ಹೆಚ್ಚಿನ ದರ ನೀಡಬೇಕು. ಸಿಎಸ್‌ಆರ್ ಅನುದಾನವನ್ನು ರೈತ ಪರ ಯೋಜನೆಗಳಿಗೆ ಬಳಕೆಯಾಗಬೇಕು. ಕಬ್ಬು ಒದಗಿಸುವ ರೈತರಿಗೆ ಎಚ್‌ಎನ್‌ಟಿ ಕಬ್ಬು ಕಟಾವು ಹಾಗೂ ಸಾಗಾಣಿಕೆ ವೆಚ್ಚವನ್ನು ಏಕರೂಪದಲ್ಲಿ ಪಾವತಿಸಲು ಕ್ರಮ ವಹಿಸುವಂತೆ ಸೇರಿದಂತೆ ಹಲವು ಸಲಹೆಗಳನ್ನು ಸಭೆಯಲ್ಲಿದ್ದ ರೈತರು ನೀಡಿದರು.
ರೈತರ ಸಲಹೆ-ಸೂಚನೆಗಳನ್ನು ಶಾಂತಚಿತ್ತದಿಂದ ಆಲಿಸಿದ ಜಿಲ್ಲಾಧಿಕಾರಿಗಳು, ಸಲಹೆ-ಸೂಚನೆಗಳನ್ನು ಗಣನೆಗೆ ತೆದುಕೊಂಡು ನಿಯಮಾನುಸಾರ ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

