ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಶಿಸ್ತು ಸಂಯಮ ರೂಢಿಸಿಕೊಂಡು ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿ ಗುರಿ ಸಾಧನೆಯತ್ತ ಗಮನ ಹರಿಸುವಂತೆ ಜಿಪಂ ಮಾಜಿ ಅಧ್ಯಕ್ಷ ಸಿದ್ದನಗೌಡ ಪೊಲೀಸ್ ಪಾಟೀಲ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪಟ್ಟಣದ ಗಂಗೂಬಾಯಿ ಶಾಂತಗೌಡ ಪೊಲೀಸ್ ಪಾಟೀಲ ಮೆಮೋರಿಯಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ವಿವಿಧ ಸಮಿತಿಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ವಿನಯದಿಂದ ಕಲಿತು ಸಮಾಜಕ್ಕೆ ಕೊಡುಗೆ ನೀಡುವ ಕಾರ್ಯ ವಿದ್ಯಾರ್ಥಿಗಳಾದಾಗಲಿ ಎಂದು ಶುಭ ಹಾರೈಸಿದರು.
ಕಾಲೇಜಿಗೆ ಬೇಕಾಗುವ ಎಲ್ಲಾ ಮೂಲಭೂತ ಸೌಕರ್ಯ ಒದಗಿಸಲು ಸಚಿವರು ಬದ್ಧರಾಗಿದ್ದು, ಕಾಲೇಜು ಮಂಡಳಿ ಇದನ್ನು ಸದುಪಯೋಗಪಡಿಸಿಕೊಂಡು ನ್ಯಾಕ್ (ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ) ಗ್ರೇಡ್ ಪಡೆದುಕೊಳ್ಳುವ ಕೆಲಸ ಮಾಡಲಿ. ಅಲ್ಲದೇ ಕ್ಯಾಂಟೀನ್ ವ್ಯವಸ್ಥೆ ಅವಶ್ಯಕತೆಯಿದ್ದಲ್ಲಿ ಕಾಲೇಜು ಪಕ್ಕದಲ್ಲಿರುವ ತಮ್ಮ ಸ್ವಂತ ಜಾಗದಲ್ಲಿ ತಾತ್ಕಾಲಿಕ ಶೆಡ್ ಹೊಡೆದು ಆರಂಭಿಸುವಂತೆ ತಿಳಿಸಿದವರು, ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಈಗಾಗಲೇ ವಿಶ್ವವಿದ್ಯಾಲಯ ಸ್ಥಾಪನೆಯಾಗಿದ್ದು, ಅದರಂತೆ ಯಾದಗಿರಿ ಜಿಲ್ಲೆಯಲ್ಲಿ ಕೂಡ ಇದು ಅತ್ಯವಶ್ಯಕವಾಗಿದೆ. ಶೀಘ್ರವೇ ಗಿರಿ ಜಿಲ್ಲೆಯಲ್ಲೂ ವಿವಿ ಸ್ಥಾಪಿಸುವಂತೆ ಸಚಿವರಲ್ಲಿ ಮನವಿ ಮಾಡಲಾಗುವುದು ಎಂದು ಹೇಳಿದರು.
ಹಿರೇಮಠ ಸಂಸ್ಥಾನದ ಚನ್ನಬಸವ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪ್ರಾಂಶುಪಾಲರಾದ ನಾಗಪ್ಪ ಚವಲ್ಕರ್ ಮಾತನಾಡಿ,ಕಾಲೇಜಿನ ಬೆಳವಣಿಗೆ ಕುರಿತು ಹಾಗೂ ನ್ಯಾಕ್ ಅನುಷ್ಟಾನಕ್ಕೆ ಬೇಕಾಗಿರುವ ಸಕಲ ಸವಲತ್ತು ಸಿದ್ಧತೆ ಮಾಡಿಕೊಂಡಿರುವ ಬಗ್ಗೆ ತಿಳಿಸಿದರು.
ಈ ವೇಳೆ ವರ್ತಕರಾದ ಶರಣಬಸವ (ಕಾಕಾ) ದಿಗ್ಗಾವಿ, ಸಾಹೇಬಲಾಲ್ ಆಂದೇಲಿ, ಪಿಯು ಕಾಲೇಜು ಪ್ರಾಂಶುಪಾಲ ವೀರೇಂದ್ರ ಧರಿ, ಪ್ರಾಧ್ಯಾಪಕ ನಸರೀನ್ ತಾಜ್, ಸಿದ್ದಲಿಂಗ ರಾಥೋಡ್, ಡಾ.ಪೂಜಾ ಹೊನ್ನುಟಗಿ, ಮಲ್ಲಣ್ಣ ಬಿಳೇಬಾವಿ ಶರಣಪ್ಪ ನಡಕೂರ, ಹವಿ ಸಂಘದ ಅಧ್ಯಕ್ಷ ವೀರೇಶ್ ಭಜಂತ್ರಿ ಇದ್ದರು.
ಕಾರ್ಯಕ್ರಮವನ್ನು ಡಾ.ಯಂಕನಗೌಡ ಪಾಟೀಲ್ ನಿರೂಪಿಸಿದರು. ಮಲ್ಲಿಕಾರ್ಜುನ ಮರಡ್ಡಿ, ಸ್ವಾಗತಿಸಿದರೆ, ಡಾ.ಬಸಮ್ಮ ವಂದಿಸಿದರು.

