ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪರಿಸರ, ಆರೋಗ್ಯ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆ, ಪ್ರವಾಸೋದ್ಯಮದ ಕುರಿತು ಜಾಗೃತಿಗಾಗಿ ಆಯೋಜಿಸಲಾಗಿರುವ ವೃಕ್ಷೋತ್ಥಾನ್ ಹೆರಿಟೇಜ್ ರನ್- 2024 ಓಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳೋಣ ಎಂದು ಶಾಲಾ ಶಿಕ್ಷಣ ಇಲಾಖೆಯ ಪದವಿ ಪೂರ್ವ ವಿಭಾಗದ ಉಪನಿರ್ದೇಶಕ ಸಿ. ಕೆ. ಹೊಸಮನಿ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಉಪನಿರ್ದೇಶಕರ ಕಾರ್ಯಾಲಯ ಮತ್ತು ಎಸ್. ಎಸ್. ಪದವಿ ಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ವೃಕ್ಷೋತ್ಥಾನ್ ಹೆರಿಟೇಜ್ ರನ್ ಅಂಗವಾಗಿ ನಡೆದ ಪಿಯು ಕಾಲೇಜುಗಳ ಪ್ರಾಚಾರ್ಯರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಈ ಬಾರಿ ಡಿಸೆಂಬರ್ 22 ರಂದು ಹೆರಿಟೇಜ್ ರನ್ ಓಟ ನಡೆಯಲಿದೆ. ಕಳೆದ ಸಲಕ್ಕಿಂತ ಈ ಬಾರಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸೋಣ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹಿಸೋಣ. ಈ ಓಟದಲ್ಲಿ ಪಾಲ್ಗೊಳ್ಳಲು ಹೆಸರು ನೋಂದಣಿ ಕುರಿತು ಪ್ರತಿನಿತ್ಯ ಮಾಹಿತಿ ಸಂಗ್ರಹಕ್ಕಾಗಿ ಸಮಿತಿ ರಚಿಸಲಾಗಿದ್ದು, ಈ ಸಮಿತಿ ಪ್ರತಿದಿನ ಫಾಲೋಅಪ್ ಮಾಡಲಿದೆ. ಪಿಯು ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸೋಣ ಎಂದು ಅವರು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಮಹಾಂತೇಶ ಬಿರಾದಾರ, ಕಳೆದ ಐದಾರು ವರ್ಷಗಳಿಂದ ಹೆರಿಟೇಜ್ ರನ್ ನಡೆಯುತ್ತಿದ್ದು, ಪರಿಸರ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ಓಟದಲ್ಲಿ ಪಾಲ್ಗೋಳ್ಳುವವರ ಸಂಖ್ಯೆ ಪ್ರತಿವರ್ಷ ಹೆಚ್ಚಾಗುತ್ತಿದೆ. ಕಳೆದ ವರ್ಷ ನಡೆದ ಓಟದಲ್ಲಿ 9800 ಜನ ಪಾಲ್ಗೊಂಡಿದ್ದಾರೆ. ಶೇ. 35 ರಷ್ಟು ಅರಣ್ಯವಿದ್ದರೆ ಉತ್ತಮ ಪರಿಸರದ ಜೊತೆಗೆ ಸದೃಢ ಆರೋಗ್ಯ ಹೊಂದಬಹುದು. ಆದರೆ, ನಮ್ಮ ಜಿಲ್ಲೆಯಲ್ಲಿ ಅರಣ್ಯ ಪ್ರಮಾಣ ಕೇವಲ ಶೇ. 0.17 ರಷ್ಟಿದೆ. ಶತಮಾನದ ದಾಖಲೆ ನೋಡಿದರೆ ಜಿಲ್ಲೆಯಲ್ಲಿ ಮಳೆ ಅತೀ ಕಡಿಮೆ ಆಗುತ್ತಿತ್ತು. ಶ್ರೀ ಸಿದ್ಧೇಶ್ವರ ಸ್ವಾಮೀಜಿ ಪರಿಸರಕ್ಕಾಗಿ ತಮ್ಮ ಜೀವನವನ್ನು ಸಮರ್ಪಿಸಿದ್ದಾರೆ. ಸಚಿವ ಎಂ. ಬಿ. ಪಾಟೀಲ ಅವರ ದೂರದೃಷ್ಠಿಯ ಫಲವಾಗಿ ಹೆರಿಟೇಜ್ ರನ್ ಆಯೋಜಿಸಲಾಗುತ್ತಿದೆ. ಇದರಿಂದ ಜನರಲ್ಲಿ ಅರಣ್ಯೀಕರಣ, ಮಳೆ, ಬೆಳೆ ಕುರಿತು ಜಾಗೃತಿ ಮೂಡಿದೆ. ಕೋಟಿ ವೃಕ್ಷ ಅಭಿಯಾನದ ಪರಿಣಾಮವಾಗಿ ಜಿಲ್ಲೆಯಲ್ಲಿ ಸರಕಾರಿ, ಗೌಂಟಾಣ, ಅರಣ್ಯ ಇಲಾಖೆಯ ಜಾಗದಲ್ಲಿ ಗಿಡಗಳು ಬೆಳೆಯುತ್ತಿವೆ. ಕರಾಡದೊಡ್ಡಿಯಲ್ಲಿರುವ ಮಾನವ ನಿರ್ಮಿತ ಅರಣ್ಯ ಪ್ರದೇಶ ಇತರರಿಗೆ ಮಾದರಿಯಾಗಿದೆ. ಬಬಲೇಶ್ವರ ತಾಲೂಕಿನ ಮಮದಾಪುರದಲ್ಲಿರುವ 1500 ಎಕರೆ ಮೀಸಲು ಅರಣ್ಯಕ್ಕೆ ಸರಕಾರ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಹೆಸರನ್ನು ನಾಮಕರಣ ಮಾಡಿ ಗೌರವ ಸಲ್ಲಿಸಿದೆ. ಈ ಓಟ ಆಯೋಜನೆಯಿಂದ ಜಿಲ್ಲೆಯ ಪ್ರಾಚೀನ ಸ್ಮಾರಕಗಳು, ದೇವಸ್ಥಾನಗಳಿಗೆ ದೇಶಾದ್ಯಂತ ಪ್ರಚಾರ ಸಿಗುತ್ತಿದೆ. ವಿದೇಶಿ ಪ್ರವಾಸಿಗರು ಹೆಚ್ಚೆಚ್ಚು ಬರಲು ಆಕರ್ಷಿತರಾಗುತ್ತಿದ್ದಾರೆ. ಪ್ರವಾಸೋದ್ಯಮದ ಜೊತೆ ವ್ಯಾಪಾರ ವಹಿವಾಟು, ಆರ್ಥಿಕ ಅಭಿವೃದ್ಧಿಗೂ ಪೂರಕ ವಾತಾವರಣ ಸೃಷ್ಠಿಯಾಗಿದೆ. ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಕ್ರೀಡೆ, ದೈಹಿಕ ಕಸರತ್ತಿನ ಬಗ್ಗೆಯೂ ಪ್ರೋತ್ಸಾಹ ನೀಡಬೇಕು. ಹೆರಿಟೇಜ್ ರನ್ ನಲ್ಲಿ ಪ್ರಾಚಾರ್ಯರು, ಉಪನ್ಯಾಸಕರು, ವಿದ್ಯಾರ್ಥಿ ಕೂಡ ಹೆಚ್ಚೆಚ್ಚು ಪಾಲ್ಗೊಳ್ಳಬೇಕು. ಇದು ಕೇವಲ ಓಟ ಮಾತ್ರವಲ್ಲ ವಾಕಿಂಗ್ ಕೂಡ ಮಾಡಬಹುದು ಎಂದು ಹೇಳಿದರು.
ವೃಕ್ಷೋತ್ಥಾನ್ ಹೆರಿಟೇಜ್ ರನ್-2024 ನೋಂದಣಿ ಸಮಿತಿಯ ವೀರೇಂದ್ರ ಗುಚ್ಚೆಟ್ಟಿ ಮಾತನಾಡಿ, ಉತ್ತಮ ಆರೋಗ್ಯಕ್ಕೆ ದೈಹಿಕ ಕಸರತ್ತು ಮುಖ್ಯ. ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಹಿರಿಯರವರೆಗೆ ಬೆಳಗ್ಗಿನ ವಾಕಿಂಗ್, ದೈಹಿಕ ಕಸರತ್ತು ಕಡಿಮೆಯಾಗುತ್ತಿದೆ. ಎಲ್ಲರೂ ಬಹುತೇಕ ಮೊಬೈಲ್ ಗೆ ಅಂಟಿಕೊಂಡಿದ್ದಾರೆ. ಶಿಕ್ಷಣದ ಜೊತೆಗೆ ದೈಹಿಕ ಕಸರತ್ತು ಮುಖ್ಯವಾಗಿರುವುದರಿಂದ ಈ ಓಟದಲ್ಲಿ ಪಾಲ್ಗೋಳ್ಳಬೇಕು. 5 ಕಿ. ಮೀ., 10 ಕಿ. ಮೀ., 21 ಕಿ. ಮೀ. ವಿಭಾಗದಲ್ಲಿ ಓಟ ನಡೆಯಲಿದೆ. ಈ ಹೆರಿಟೇಜ್ ರನ್ ನಲ್ಲಿ ಪಾಲ್ಗೊಂಡು ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಪರಿಸರ ಪ್ರೀತಿಗೆ ಗೌರವ ನೀಡಬೇಕು. ದೇಶ- ವಿದೇಶಗಳಿಂದಲೂ ಓಟಗಾರರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಕ್ಯೂ ಆರ್ ಕೋಡ್ ಸ್ಕ್ಯಾನ್ ಅಥವಾ ಲಿಂಕ್ ಕ್ಲಿಕ್ ಮಾಡುವ ಮೂಲಕ ನೋಂದಣಿ ಮಾಡಬಹುದು. ನವೆಂಬರ್ 30 ನೋಂದಣಿಗೆ ಕೊನೆಯ ದಿನವಾಗಿದೆ ಎಂದು ಹೇಳಿದರು.
ಸಂಚಾಲಕ ಡಾ. ಮುರುಗೇಶ ಪಟ್ಟಣಶೆಟ್ಟಿ ಮಾತನಾಡಿ, ಆನಲೈನ್ ಮೂಲಕ ನೋಂದಣಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಬಲ್ಕ್ ನೋಂದಣಿಗೂ ಅವರಿಗೂ ಅವಕಾಶವಿದೆ. ಆದಷ್ಟು ಬೇಗ ನೋಂದಣಿ ಮಾಡಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಿಯು ಕಾಲೇಜು ಪ್ರಾಚಾರ್ಯರ ಮಹಾಮಂಡಳದ ಕಾರ್ಯದರೆ. ಎಂ. ಉಪ್ಪಾರ, ಖೇಡ ಕಾಲೇಜಿನ ಪ್ರಾಚಾರ್ಯ ಎಂ. ಬಿ. ಹೆಬ್ಬಿ, ಎಸ್. ಎಸ್. ಪಿಯು ಕಾಲೇಜಿನ ಪ್ರಾಚಾರ್ಯ ಡಾ. ಗಿರೀಶ ಡಿ. ಅಕಮಂಚಿ ಉಪಸ್ಥಿತರಿದ್ದರು
ಉಪನ್ಯಾಸಕ ತುಳಸಿದಾಸ ಎಂ. ಪವಾರ ಸ್ವಾಗತಿಸಿದರು. ಉಪನ್ಯಾಸಕಿ ಜೆ. ಎಂ. ಬಿರಾದಾರ ನಿರೂಪಿಸಿದರು.
ಈ ಸಂದರ್ಭದಲ್ಲಿ ಪಿ.ಎಚ್.ಡಿ ಪದವಿ ಪಡೆದ ಡಾ. ಕಿರಣ ನಡಕಟ್ಟಿ, ಡಾ. ಮಹಾಂತೇಶ ಬಿರಾದಾರ ಸನ್ಮಾನಿಸಲಾಯಿತು.
ಮಾಲಿನಿ ಮಠ ಪ್ರಾರ್ಥಿಸಿದರು. ಪಿ. ಎಂ. ಪವಾರ ಸ್ವಾಗತಿಸಿದರು.

