ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಭಗವಂತನನ್ನು ಮನುಷ್ಯನಂತೆ ನೋಡುವುದು ಅಜ್ಞಾನ. ಜಗತ್ತಿನ ಎಲ್ಲದಕ್ಕೂ ಭಗವಂತ ಒಡೆಯನಾಗಿದ್ದಾನೆ. ನಾವು ಅಜ್ಞಾನ ಮಾರ್ಗದಲ್ಲಿ ನಡೆದರೆ ಮೋಕ್ಷ ಪಡೆಯಲು ಅಸಾಧ್ಯ ಎಂದು ಶಿರಸಿಯ ಸೋಂದಾ ಸ್ವರ್ಣವಲ್ಲಿ ಮಠದ ಶಂಕರಾಚಾರ್ಯ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.
ಪಟ್ಟಣದ ಗ್ರಾಮದೇವಿ ದೇವಸ್ಥಾನದ ಹತ್ತಿರವಿರುವ ಜಗದ್ಗುರು ಮಧ್ವಾಚಾರ್ಯರ ಮೂಲ ಸಂಸ್ಥಾನ ಉತ್ತರಾಧಿಮಠದಲ್ಲಿ ಭಗವದ್ಗೀತಾ ಅಭಿಯಾನದಂಗವಾಗಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಭಗವದ್ಗೀತೆ ಪಠಣ ಕಾರ್ಯಕ್ರಮ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಭಗವಂತನ ಮಹಿಮೆಯನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು. ಬೇರೆ ಎಲ್ಲವನ್ನು ಮರೆತು ಭಗವಂತನ ಆರಾಧನೆ ಮಾಡಿದರೆ ಮೋಕ್ಷ ಪಡೆಯಲು ಸಾಧ್ಯ. ನಾವೆಲ್ಲರೂ ಮೋಕ್ಷದ ದಾರಿಯಲ್ಲಿ ಸಾಗಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಶ್ರೀಮಠದಿಂದ ಭಗವದ್ಗೀತಾ ಅಭಿಯಾನ ಕಳೆದ ೨೦೦೭ ರಿಂದ ನಾಡಿನಲ್ಲಿ ಹಮ್ಮಿಕೊಂಡಿದೆ. ಈ ವರ್ಷ ವಿಜಯಪುರ ಜಿಲ್ಲೆಯಲ್ಲಿ ಈ ಅಭಿಯಾನ ಆರಂಭವಾಗಿದೆ. ಈ ತಾಲೂಕಿನಲ್ಲಿಯೂ ಈ ಅಭಿಯಾನ ನಡೆಯುವಂತಾಗಬೇಕು. ಇದಕ್ಕೆ ಅಗತ್ಯವಿರುವ ಸಮಿತಿ ರಚನೆ ಮಾಡುವ ಮೂಲಕ ಪ್ರಶಿಕ್ಷಣ ಕಾರ್ಯಕ್ರಮ ನಡೆಯುವಂತಾಗಬೇಕು. ಶಾಲಾ ಮಕ್ಕಳಿಗೆ ಭಗವದ್ಗೀತಾ ಅಭಿಯಾನ ಮುಟ್ಟುವಂತಾಗಬೇಕು. ಈ ತಾಲೂಕಿನಲ್ಲಿ ನ.೨೦ ರಿಂದ ಆರಂಭವಾಗುವ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಿ ಜನಮಾನಸಕ್ಕೆ ಭಗವದ್ಗೀತಾ ಸಂದೇಶ ತಲುಪುವಂತಾಗಬೇಕೆಂದ ಅವರು ಮಕ್ಕಳಿಗೆ ನಡೆಯುವ ವಿವಿಧ ಸ್ಪರ್ಧೆಯಲ್ಲಿ ಹೆಚ್ಚು ಮಕ್ಕಳು ಭಾಗವಹಿಸುವಂತಾಗಬೇಕು. ಮಹಿಳೆಯರು ಈ ಅಭಿಯಾನದಲ್ಲಿ ಹೆಚ್ಚು ಭಾಗವಹಿಸುವಂತಾಗಬೇಕು. ಎಲ್ಲರೂ ನಿತ್ಯ ಭಗವದ್ಗೀತೆಯ ಪಠಣ ಮಾಡುವಂತಾಗಬೇಕೆಂದರು.
ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭಗವದ್ಗೀತೆ ಕೇವಲ ಪಂಡಿತರಿಗೆ ಮಾತ್ರ ಸೀಮಿತವಲ್ಲ. ಇದು ಎಲ್ಲ ಜನರು ಓದಿ ಎಲ್ಲರೂ ಸನ್ಮಾರ್ಗದಲ್ಲಿ ನಡೆಯುವಂತಾಗಬೇಕು. ಇದನ್ನು ನಿರಂತರವಾಗಿ ಓದುವದರಿಂದ ಜ್ಞಾನ ಸಂಪತ್ತು ಹೆಚ್ಚಾಗುತ್ತದೆ. ಭಗವದ್ಗೀತೆಯ ಸಂದೇಶವನ್ನು ಜನರಿಗೆ ಮುಟ್ಟಿಸುವ ಕಾರ್ಯ ಶ್ಲಾಘನೀಯ ಎಂದರು.
ಇಂದು ಜನರು ಸಮಯಕ್ಕೆ ಬೆಲೆ ಕೊಡುತ್ತಿಲ್ಲ. ಪ್ರತಿಯೊಬ್ಬರೂ ದಿನ ಕಳೆದಂತೆ ಆಯುಷ್ಯ ಕಡಿಮೆಯಾಗುತ್ತಾ ಸಾಗುತ್ತದೆ ವಿನಃ ಆಯುಷ್ಯ ಹೆಚ್ಚಾಗುವುದಿಲ್ಲ ಎಂಬುವದನ್ನು ಅರಿತುಕೊಂಡು ನಮಗೆ ಸಿಕ್ಕಿರುವ ಅಮೂಲ್ಯ ಜೀವನವನ್ನು ಸದುಪಯೋಗ ಪಡಿಸಿಕೊಂಡು ಆಧ್ಯಾತ್ಮಿಕ ವಿಚಾರಗಳನ್ನು ಅರಿತುಕೊಂಡು ಜೀವನ ಸುಂದರವಾಗಿ ಕಳೆಯಬೇಕಿದೆ. ಇಂದಿನ ಯುವಜನಾಂಗಕ್ಕೆ ಭಗವದ್ಗೀತೆ, ಮಹಾಭಾರತ-ರಾಮಾಯಣದಂತಹ ಅಮೂಲ್ಯ ಕೃತಿಯಲ್ಲಿರುವ ಸಂದೇಶಗಳನ್ನು ಮುಟ್ಟಿಸುವ ಅಗತ್ಯವಿದೆ ಎಂದರು. ಕಾರ್ಯಕ್ರಮದಲ್ಲಿ ಅನೇಕ ಜನರು, ಮಹಿಳೆಯರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ತಾಲೂಕಿನಲ್ಲಿ ನಡೆಯುವ ಅಭಿಯಾನದ ಸಮಿತಿ ರಚಿಸಲಾಯಿತು. ಮುತ್ತಗಿಯ ನರಹರಿ ಆಚಾರ್ಯರು ನಿರೂಪಿಸಿದರು.

