ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೨೦೨೨- ೨೦೨೪ ಸಾಲಿನಲ್ಲಿ ವಿಜಯಪುರ ತಾಲೂಕಿನಲ್ಲಿ ಕೃಷಿ ಇಲಾಖೆಯಡಿ ನರೇಗಾ ಯೋಜನೆಯ ದುರ್ಬಳಕೆ ಹಾಗೂ ಭ್ರಷ್ಟಾಚಾರ ಆಗಿರುವ ಆರೋಪ ಕೇಳಬರುತ್ತಿದೆ, ಅಂತಹ ಭ್ರಷ್ಟ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಿ ಆಗಿರುವ ನಷ್ಟವನ್ನು ಸರ್ಕಾರದ ಖಜಾನೆಗೆ ದಂಡದೊಂದಿಗೆ ಭರಿಸಬೇಕು ಹಾಗೂ ಅವರ ಬೆಂಬಲಕ್ಕೆ ನಿಂತ ಅಧಿಕಾರಿಗಳನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾ ಪಂಚಾಯಿತ ಉಪ ಕಾರ್ಯದರ್ಶಿಗಳು ವಿಜಯಕುಮಾರ ಅಜೂರ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.
ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ವಿಜಯಪುರ ತಾಲೂಕಿನ ಕೃಷಿ ಇಲಾಖೆಗೆ ಸಂಬಂಧಿಸಿದ ೨೦೨೨, ೨೦೨೩, ೨೦೨೪ ನೇ ಸಾಲಿನಲ್ಲಿ ನರೇಗಾ ಯೋಜನೆಯ ಅನುದಾನವನ್ನು ದುರ್ಬಳಕೆ ಮಾಡಿಕೊಂಡು ರೈತರಿಗೆ ಹಾಗೂ ಸರ್ಕಾರಕ್ಕೆ ಅನ್ಯಾಯವೆಸಗಿರುವ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಅವರು ಹೇಳುತ್ತಿರುವುದು ನೋಡಿದರೆ ಇದರಲ್ಲಿ ಇಲಾಖೆಯ ಎಲ್ಲಾ ಅಧಿಕಾರಿಗಳು ಶಾಮೀಲಾಗಿರುವುದು ಕಂಡು ಬರುತ್ತದೆ. ಅಂತಹ ರೈತ ವಿರೋಧಿ ಅಧಿಕಾರಿಗಳನ್ನು ಕೂಡಲೇ ಕೆಲಸದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಕೂಲಿಕಾರ್ಮಿಕರಿಗೆ ಹಾಗೂ ರೈತರಿಗೆ ಅನುಕೂಲ ಆಗಲು ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ, ಆದರೆ ನಿಮ್ಮ ಇಲಾಖೆಯಿಂದ ಹೊರಗುತ್ತಿಗೆ ಮೇಲೆ ಕೆಲಸ ಮಾಡುತ್ತಿರುವ ಇಂಜಿನಿಯರಗಳು ರೈತರಿಂದ ಲಂಚ ಪಡೆದು ಮಧ್ಯವರ್ತಿಗಳಿಂದ ನರೇಗಾವನ್ನು ಹಳ್ಳ ಹಿಡಿಸುವ ಕೆಲಸ ಮಾಡಿದ್ದಾರೆ, ಬಹುತೇಕ ಕಾಮಗಾರಿಗಳು ಯಂತ್ರಗಳಿಂದ ಮಾಡಿ ನಕಲಿ ಕಾರ್ಮಿಕರನ್ನು ಬೋರ್ಡ ಮುಂದೆ ನಿಲ್ಲಿಸಿ ಪೊಟೊ ತೆಗೆದು ಮನೆಯಲ್ಲಿಯೇ ಇರುವ ಕಾರ್ಮಿಕರ ಖಾತೆಗೆ ಹಣ ಹಾಕಿ ಅವರಿಗೂ ಸ್ವಲ್ಪ ಕೊಟ್ಟು ಉಳಿದೆಲ್ಲ ಹಣವನ್ನು ನುಂಗಿ ನೀರು ಕುಡಿದಿರುವ ಕುರಿತು ರೈತರಿಂದ ಸಾಕಷ್ಟು ದೂರುಗಳು ಬಂದಿವೆ.
ಆದ್ದರಿಂದ ವಿಜಯಪುರ ತಾಲೂಕಿನಲ್ಲಿ ಕಳೆದ ೩ ವರ್ಷಗಳಲ್ಲಿ ಆಗಿರುವ ಕೃಷಿ ಇಲಾಖೆಯ ನರೇಗಾ ಕಾಮಗಾರಿಯನ್ನು ತನಿಖೆ ಮಾಡಬೇಕು ಹಾಗೂ ತಪ್ಪಿತಸ್ಥರನ್ನು ವಜಾಗೊಳಿಸಬೇಕು ಮತ್ತು ಆಗಿರುವ ಭ್ರಷ್ಠಾಚಾರದ ಹಣವನ್ನು ದಂಡದೊಂದಿಗೆ ಸರ್ಕಾರ ಖಜಾನೆಗೆ ಕಟ್ಟಿಸಬೇಕು, ಇಲ್ಲದಿದ್ದಲ್ಲಿ ನಿಮ್ಮ ಇಲಾಖೆಯ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ದೊಡ್ಡ ಮಟ್ಟದ ಹೊರಾಟ ಮಾಡಬೇಕಾಗುವುದು ಎಂದು ಈ ಮೂಲಕ ಆಗ್ರಹಿಸುತ್ತಿದ್ದೆವೆ ಎಂದರು.
ಈ ವೇಳೆ ಜಿಲ್ಲಾ ಸಂಚಾಲಕ ರಾಮನಗೌಡ ಪಾಟೀಲ, ಮಹಾಂತೇಶ ಮಮದಾಪುರ, ನಜೀರ ನಂದರಗಿ, ನಗರ ಘಟಕದ ಅಧ್ಯಕ್ಷರಾದ ಸಂಗಪ್ಪ ಟಕ್ಕೆ, ಕೋಲಾರ ಅಧ್ಯಕ್ಷ ಸೋಮು ಬಿರಾದಾರ, ಮಹಾದೇವಪ್ಪ ತೇಲಿ, ಪ್ರಕಾಶ ತೇಲಿ, ಶಾನೂರ ನಂದರಗಿ, ಹಣಮಂತ ಬ್ಯಾಡಗಿ, ಸೇರಿದಂತೆ ಅನೇಕರು ಇದ್ದರು

