ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಗೆಳೆತನ ಎಂಬುದೊಂದು ಗಟ್ಟಿ ಬಂಧನ. ಸ್ನೇಹ ಆಕಸ್ಮಿಕವಾದರೂ ಅಪರೂಪವಾದ ಬಂಧ. ನಮ್ಮ ನೋವು-ನಲಿವಿಗೆ ಸ್ಪಂದಿಸುವ ಆ ಜೀವದಿಂದ ಸಿಗುವ ಕಾಳಜಿ, ಆತ್ಮೀಯತೆ ಮತ್ತು ಸಂತೋಷಕ್ಕೆ ಬೆಲೆ ಕಟ್ಟಲಾಗದು ಎಂದು ’ಉದಯರಶ್ಮಿ’ ಪತ್ರಿಕೆ ಸಂಪಾದಕ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಇಂದುಶೇಖರ ಮಣೂರ ಹೇಳಿದರು.
ವಿಜಯಪುರದ ಚಾಣಕ್ಯ ಮಹಾವಿದ್ಯಾಲಯದಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಯು ಈ ವಿದ್ಯಾಲಯದ ಸಹಯೋಗದೊಂದಿಗೆ ಆಯೋಜಿಸಿದ “ಮೈಸೂರು ಸಾಂಪ್ರದಾಯಿಕ ಶೈಲಿ ತರಬೇತಿ ಕಾರ್ಯಾಗಾರ” ದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಕಲಾವಿದ ಮಿತ್ರರಿಂದ ತಮ್ಮದೇ ಭಾವಚಿತ್ರದ ಕಲಾಕೃತಿ ಸ್ವೀಕರಿಸಿ ಅವರು ಭಾವುಕರಾಗಿ ನುಡಿದರು.
ಎಂಭತ್ತರ ದಶಕದ ಸ್ನೇಹಿತರನ್ನು ಹಲವು ದಶಕಗಳ ಬಳಿಕ ಮುಖಾಮುಖಿಯಾಗಿದ್ದು ಇದೊಂದು ಅವಿಸ್ಮರಣೀಯ ಘಳಿಗೆ. ಸಂತೋಷಕುಮಾರ್ ಮತ್ತು ರವೀಶ್ ಇವರೊಂದಿಗಿನ ಎಂದೂ ಮಾಸದ ನೆನಪುಗಳಿಗೆ ಇಂದಿನ ಈ ಮಿಲನ ಮತ್ತಷ್ಟು ರಂಗು ತುಂಬಿದೆ ಎಂದು ಇಂದುಶೇಖರ ಮಣೂರ ಸಂತಸ ವ್ಯಕ್ತಪಡಿಸಿದರು.
ಸಂಪಾದಕ ಮಣೂರ ಅವರ ೮೦ ರ ದಶಕದ ಬೆಂಗಳೂರಿನ ಕೆನ್ ಕಲಾ ಶಾಲೆಯ ಸಹಪಾಠಿಗಳಾದ ಚಿಕ್ಕಬಳ್ಳಾಪುರದ ಕಲಾ ಶಿಕ್ಷಕ ಸಂತೋಷಕುಮಾರ ಎನ್.ಆರ್ ಹಾಗೂ ಮೈಸೂರಿನ ಕಲಾ ಶಿಕ್ಷಕ ಎಚ್.ಎನ್.ರವೀಶ್ ಮಾತನಾಡಿ, ಸ್ನೇಹದಲ್ಲಿ ಅಹಂ ಆಗಲಿ, ದ್ವೇಷವಾಗಲಿ ಸುಳಿಯಬಾರದು. ಸ್ನೇಹ ಸರಿಯಾದ ಮಾರ್ಗದಲ್ಲಿ ನಡೆಯಲು ನಮ್ಮ ಸುಗುಣಗಳು ಸಹಕಾರಿಯಾಗಬೇಕು. ನಿಜವಾದ ಸ್ನೇಹಿತರ ನಡುವಿನ ಬಾಂಧವ್ಯ ಎಷ್ಟು ಪ್ರಬಲವಾಗಿದೆಯೆಂದರೆ, ಅದು ಜೀವನದುದ್ದಕ್ಕೂ ಇರುತ್ತದೆ. ನಿಜವಾದ ಸ್ನೇಹಿತನನ್ನು ಹೊಂದಿರುವುದು ತುಂಬಾ ಮೌಲ್ಯಯುತವಾದುದು ಎಂದ ಅವರು ’ಕೆನ್ ಸ್ಕೂಲ್ ಆಫ್ ಆರ್ಟ್’ ದಿನಗಳನ್ನು ಮೆಲುಕು ಹಾಕಿದರು.
ಈ ಹಳೆಯ ಮಿತ್ರರ ಮಾಸದ ನೆನಪುಗಳ ಮೆರವಣಿಗೆಗೆ ತುಮಕೂರಿನ ಹಿರಿಯ ಕಲಾವಿದ ರವಿಕುಮಾರ್ ಡಿ.ಬಿ, ಮೈಸೂರಿನ ಕಲಾವಿದ ರಾಜಕುಮಾರ್ ಸಾಕ್ಷಿಯಾಗಿದ್ದರು.

ಭಾವಚಿತ್ರ ಕಲಾಕೃತಿ ಕೊಡುಗೆ
ಚಿಕ್ಕಬಳ್ಳಾಪುರ ದ ಹಿರಿಯ ಕಲಾವಿದ ಸಂತೋಷಕುಮಾರ ಎನ್.ಆರ್ ತಮ್ಮ ಸನ್ಮಿತ್ರ, ’ಉದಯರಶ್ಮಿ’ ಸಂಪಾದಕ ಇಂದುಶೇಖರ ಮಣೂರ ಅವರಿಗೆ ತಾವು ಅಭಿಮಾನದಿಂದ ಸ್ನೇಹದ್ಯೋತಕವಾಗಿ ರಚಿಸಿದ ಅವರದೇ ಭಾವಚಿತ್ರದ ಕಲಾಕೃತಿಯನ್ನು ನೀಡಿ ಗೌರವಿಸಿದರು.

“ವರ್ಷಗಳು ಕಳೆದಂತೆ ಹಳೆಯ ಸ್ನೇಹಿತರು ನಮಗೆ ಹೆಚ್ಚು ಹೆಚ್ಚು ಅಮೂಲ್ಯರಾಗುತ್ತಾರೆ. ಹಿಂದೆ ಹೇಗೆ ಇದ್ದೆವು? ಈಗ ಹೇಗಾಗಿದ್ದೇವೆ? ಪಟ್ಟ ತೊಂದರೆಗಳು, ಗಳಿಸಿದ ಸಾಮರ್ಥ್ಯಗಳು ಈ ಎಲ್ಲವನ್ನೂ ಮೆಲುಕು ಹಾಕುತ್ತ, ನೆಮ್ಮದಿಯ ಬದುಕಿನ ಮಾರ್ಗವನ್ನು ಇನ್ನಷ್ಟು ಸುಗಮಗೊಳಿಸಿಕೊಳ್ಳಬಹುದು. ಪರಿಶುದ್ಧ, ನಿಸ್ವಾರ್ಥ, ತ್ಯಾಗದಿಂದ ಕೂಡಿದ ನಿಷ್ಕಲ್ಮಶ ಸ್ನೇಹ ಸಮಾಜಕ್ಕೂ ಒಳಿತನ್ನುಂಟು ಮಾಡುತ್ತದೆ.”
– ಇಂದುಶೇಖರ ಮಣೂರ
ಸಂಪಾದಕರು, ’ಉದಯರಶ್ಮಿ’ ದಿನಪತ್ರಿಕೆ

