ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಶ್ರೀ ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನದ ಸಹಯೋಗದಲ್ಲಿ ನಡೆಯುತ್ತಿರುವ ಭಗವದ್ಗೀತಾ ಅಭಿಯಾನದ ಹಿನ್ನೆಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ೧ ಸಾವಿರಕ್ಕೂ ಹೆಚ್ಚು ಭಗವದ್ಗೀತೆಯ ಪ್ರತಿಗಳನ್ನು ಉಚಿತವಾಗಿ ವಿತರಿಸಲಾಯಿತು.
ಈ ವೇಳೆ ಅಭಿಯಾನದ ಕಾರ್ಯಾಧ್ಯಕ್ಷ ಉಮೇಶ ಕಾರಜೋಳ ಮಾತನಾಡಿ, ಭಗವದ್ಗೀತೆ ಮನುಷ್ಯನಿಗೆ ನೈತಿಕತೆ ಬೋಧಿಸುವ ದಿವ್ಯ ಗ್ರಂಥ. ಗೀತಾ ಸಾರವನ್ನು ತಿಳಿದುಕೊಂಡು ಬದುಕಿದರೆ ಇಡೀ ಬದುಕೇ ಧನ್ಯವಾಗುತ್ತದೆ. ಇಡೀ ಬದುಕಿನ ನಿಜಾರ್ಥವೇ ಭಗವದ್ಗೀತೆಯಲ್ಲಿ ಅಡಗಿದೆ. ಮಕ್ಕಳು ಬಾಲ್ಯದಲ್ಲಿಯೇ ಭಗವದ್ಗೀತೆಯ ತತ್ವಗಳನ್ನು ಅಳವಡಿಸಿಕೊಳ್ಳಲು ನೆರವಾಗಲು ಈ ಅಭಿಯಾನ ಸಂಘಟಿಸಲಾಗುತ್ತಿದೆ, ಮಕ್ಕಳು ಭಗವದ್ಗೀತೆಯನ್ನು ಓದುವ ಪರಿಪಾಠ ಅದರಲ್ಲಿರುವ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸುಂದರ ಜೀವನ ಹಾಗೂ ಭವಿಷ್ಯ ರೂಪಿಸಿಕೊಳ್ಳಬೇಕಿದೆ ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಪ್ರಧಾನ ಆಯುಕ್ತ ಸಿದ್ಧಣ್ಣ ಸಕ್ರಿ, ಸಹಜಾನಂದ ದಂದರಗಿ, ಜಿಲ್ಲಾ ಯುವ ಪರಿಷತ್ ಜಿಲ್ಲಾಧ್ಯಕ್ಷ ಶರಣು ಸಬರದ, ರಾಜೇಶ್ವರಿ ಮೋಪಗಾರ,ಪರಸುರಾಮ ಕುಂಭಾರ, ಎಸ್ ಎಸ್ ಬೊಮ್ಮನಹಳ್ಳಿ, ವಿದ್ಯಾವತಿ ಅಂಕಲಗಿ, ರಾಜಶೇಖರ ಖೇಡಗಿ, ವಿನೋದ ಮಣೂರ, ವಿರೇಶ ಗೊಬ್ಬೂರ ಮೊದಲಾದವರಿದ್ದರು.

