ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ತಾಲೂಕಿನ ಟಕ್ಕಳಕಿ ಗ್ರಾಮದ ವೆಂಕಟೇಶ್ವರ ದೇವಾಲಯದಲ್ಲಿ ಪವರ್ ಗ್ರಿಡ್ ಕಂಪನಿಯು ಭ್ರಷ್ಟಾಚಾರ ತಡೆಗಟ್ಟುವಿಕೆಯ ಕುರಿತು ಈಚೆಗೆ ಜಾಗೃತ ತಿಳುವಳಿಕೆ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಂಡಿತ್ತು.
ಕಾರ್ಯಕ್ರಮವನ್ನು ವೆಂಕಟೇಶ್ವರ ದೇವಾಲಯದ ಕಮಿಟಿ ಅಧ್ಯಕ್ಷ ಕೃಷ್ಣ ಕುರಾಡಿಕರ ಉದ್ಘಾಟಿಸಿ ಮಾತನಾಡಿದ ಅವರು, ಭ್ರಷ್ಟಾಚಾರ ಕುರಿತು ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಪವರ್ ಗ್ರಿಡ್ ಕಂಪನಿ ಹಮ್ಮಿಕೊಂಡಿರುವದು ಶ್ಲಾಘನೀಯ. ಪ್ರತಿಯೊಬ್ಬರೂ ಭ್ರಷ್ಟಾಚಾರದ ವಿರುದ್ಧ ಆಂದೋಲನದಲ್ಲಿ ಭಾಗಿಯಾಗುವ ಮೂಲಕ ಭ್ರಷ್ಟಾಚಾರವನ್ನು ತಡೆಗಟ್ಟಬೇಕಾದ ಅಗತ್ಯವಿದೆ ಎಂದರು.
ಪವರ್ ಗ್ರಿಡ್ ಕಂಪನಿಯ ಕೋಟಾನಾಗೇಶ್ವರ ಮಾತನಾಡಿ, ಭ್ರಷ್ಟಾಚಾರದ ಹಾವಳಿಯನ್ನು ನಿರ್ಮೂಲನೆ ಮಾಡಲು ಜನರ ಸಹಕಾರ ತುಂಬಾ ಅಗತ್ಯವಿದೆ. ಯಾರೂ ಲಂಚ ಕೊಡಬಾರದು. ಯಾವುದೇ ಸರ್ಕಾರಿ ನೌಕರರು ಲಂಚ ಕೇಳಿದರೆ ಇಲ್ಲವೇ ಭ್ರಷ್ಟಾಚಾರದ ಬಗ್ಗೆ ಯಾವುದೇ ಮಾಹಿತಿ ಇದ್ದರೆ ಒಂದು ವೇಳೆ ಯಾರಾದರೂ ಭ್ರಷ್ಟಾಚಾರದ ಕಿರುಕುಳಕ್ಕೆ ಒಳಗಾಗಿದ್ದರೆ ಇಲಾಖೆಯ ಮುಖ್ಯಸ್ಥರಿಗೆ ಅಥವಾ ಮುಖ್ಯ ಜಾಗೃತ ಅಧಿಕಾರಿ, ಪೊಲೀಸ್ ಅಽಕ್ಷಕರಿಗೆ ಕೇಂದ್ರ ತನಿಖಾ ಸಂಸ್ಥೆ ಮತ್ತು ಕಾರ್ಯದರ್ಶಿ ಕೇಂದ್ರ, ರಾಜ್ಯ ಜಾಗೃತ ಆಯೋಗ ಇವರಿಗೆ ದೂರು ನೀಡಬಹುದು. ಭ್ರಷ್ಟಾಚಾರ ತಡೆಗಟ್ಟುವಲ್ಲಿ ಪ್ರತಿಯೊಬ್ಬರೂ ಜಾಗೃತರಾಗಬೇಕೆಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಆರ್.ಕೆ. ಭಜಂತ್ರಿ, ಗ್ರಾಮ ಪಂಚಾಯಿತಿ ಉಪಾದ್ಯಕ್ಷೆ ಕವಿತಾ ಬಡಿಗೇರ, ಗ್ರಾಮ ಪಂಚಾಯಿತಿ ಸದಸ್ಯ ಕನಕಪ್ಪ ಬಂಡಿವಡ್ಡರ, ಗೀತಾ ಪೂಜಾರಿ, ಗುರುಲಿಂಗ ಬಂದಿ, ಪ್ರಗತಿ ಪರ ರೈತ ಬಾಬಾಸಾಹೇಬ ಯರನಾಳ ಇತರರು ಭಾಗವಹಿಸಿದ್ದರು.
