ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಟ್ಟಣದಲ್ಲಿ ನಾನು ಯಾವುದೇ ಸಾರ್ವಜನಿಕ ಆಸ್ತಿಯನ್ನು ಅಕ್ರಮವಾಗಿ ಬಳಕೆ ಮಾಡಿಕೊಂಡಿಲ್ಲ. ಹಾಗೊಂದು ವೇಳೆ ಮಾಡಿಕೊಂಡಿದ್ದೆ ಆಗಿದ್ದರೆ ಪಟ್ಟಣದ ಅತಿಕ್ರಮಿತ ಜಾಗೆಯನ್ನು ತೆರವುಗೊಳಿಸುವ ಕಾರ್ಯ ನನ್ನಿಂದ ಮಾಡಲಾಗುತ್ತಿರಲಿಲ್ಲ. ನಾನೇ ತಪ್ಪಿತಸ್ಥನಾಗಿದ್ದರೆ ಈ ಕಾರ್ಯ ಮಾಡಲು ನನಗೆ ಧೈರ್ಯವಾದರೂ ಎಲ್ಲಿಂದ ಬರುತ್ತಿತ್ತು? ಎಂದು ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಹೇಳಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಜರುಗಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಿನಾಕಾರಣ ರಾಜಕೀಯ ಪ್ರೇರಿತವಾಗಿ ಯಾವುದೇ ಆರೋಪ ಮಾಡುವುದು ಸರಿಯಲ್ಲ. ಪುರಸಭೆಯ ನನ್ನ ಕಾರ್ಯವೈಖರಿಯ ಕುರಿತಾಗಿ ಪ್ರಶ್ನಿಸಿದರೆ ನಾನು ಅದಕ್ಕೆ ಉತ್ತರ ಕೊಡಬಲ್ಲೆ. ಅದನ್ನು ಬಿಟ್ಟು ನನ್ನ ವೈಯಕ್ತಿಕ ಹಾಗೂ ಕುಟುಂಬದ ವಿರುದ್ಧ ಆರೋಪ ಮಾಡುವುದು ಎಷ್ಟು ಸರಿ? ನನ್ನ ವಿರುದ್ಧ ದಿನಕ್ಕೊಂದು ಆರೋಪ, ಸಿಬ್ಬಂದಿಗಳಿಗೆ ಕಿರುಕುಳ ಕೊಡುವುದಲ್ಲದೇ, ಯಾವುದೇ ಸಾಕ್ಷಿ ಪುರಾವೆಗಳಿಲ್ಲದೇ ನನ್ನ ವಿರುದ್ಧ ಪ್ರಕರಣ ದಾಖಲಿಸುವ ಹಾಗೂ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.
ಪಟ್ಟಣದ ೮೫೩/*/೧ರ ಕ್ಷೇತ್ರದ ೪ಎಕರೆ ೬ಗುಂಟೆ ಜಮೀನನ್ನು ಕಾನೂನಿ ಪ್ರಕಾರವೇ ಎನ್.ಎ ಮಾಡಿಸಿ ಮೂಲಭೂತ ಸೌಕರ್ಯಗಳೆಲ್ಲವನ್ನು ಒದಗಿಸಿದ್ದೇನೆ. ಯಾವುದೇ ರೀತಿಯ ಅತಿಕ್ರಮಣವಿಲ್ಲ. ಒಂದು ವೇಳೆ ಅತಿಕ್ರಮಣ ಸಾಬೀತು ಮಾಡಿದ್ದೆಯಾದರೆ ನೀವೇ ನಿಂತು ಪರಿಶೀಲಿಸಿ ಅಕ್ರಮವಾಗಿದ್ದರೆ ನೀವೇ ಅದನ್ನು ತೆರವುಗೊಳಿಸಬಹುದು. ನಾನೇ ಜೆಸಿಬಿ ವಾಹನವನ್ನು ಕಳುಹಿಸುತ್ತೇನೆ. ಮನವಿ ಸಲ್ಲಿಸಿದ ವ್ಯಕ್ತಿಯು ರಸ್ತೆಯ ಮೇಲೆ ಮೂರ‍್ನಾಲ್ಕು ಅಂಗಡಿಗಳನ್ನು ನಿರ್ಮಿಸಿ ಬಾಡಿಗೆ ಪಡೆಯುತ್ತಿದ್ದ. ತೆರವು ಕಾರ್ಯದಲ್ಲಿ ಅವುಗಳನ್ನು ಕೂಡಾ ತೆರವುಗೊಳಿಸಲಾಗಿದ್ದು, ಅದನ್ನೆ ಕಾರಣವಿಟ್ಟುಕೊಂಡು ಈ ರೀತಿಯ ಆರೋಪ ಮಾಡುತ್ತಿದ್ದಾನೆ. ಆ ವ್ಯಕ್ತಿ ಬರಿ ಮುಖ ಮಾತ್ರ. ಆದರೆ ಅದರ ಹಿಂದೆ ಕಾಣದ ಕೈಗಳ ಕೈವಾಡವಿದೆ ಎಂಬುದು ಅಷ್ಟೇ ಸ್ಪಷ್ಟವಾಗಿದೆ. ನಾನು ಯಾವುದೇ ಇಂತಹ ಆರೋಪಗಳಿಗೆ ವಿಚಲಿತನಾಗದೆ ಹಿಡಿದ ಕಾರ್ಯವನ್ನು ಪೂರ್ಣಗೊಳಿಸುವವರೆಗು ವಿರಮಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ತೆರವು ಕಾರ್ಯಾಚರಣೆಗೆ ಪುರಸಭೆಯ ೨೨ ವಾರ್ಡಿನ ಸದಸ್ಯರ ಹಾಗೂ ಸಾರ್ವಜನಿಕರ ಪೂರ್ಣ ಪ್ರಮಾಣದ ಸಹಕಾರವಿದೆ ಎಂದು ಬಿರಾದಾರ ತಿಳಿಸಿದರು.
ಈ ವೇಳೆ ಪುರಸಭೆ ಸದಸ್ಯ ಬಸವರಾಜ ಯರನಾಳ, ಸಿಬ್ಬಂದಿ ಸಿದ್ದು ಅಂಗಡಿ ಇದ್ದರು.

