ಸಾರ್ವಜನಿಕರಲ್ಲಿ ಪರ-ವಿರೋಧದ ಚರ್ಚೆ | ಆಡಳಿತ ಪಕ್ಷ ಮತ್ತು ವಿಪಕ್ಷಗಳ ಕೆಸರೆರಚಾಟ | ಪರಸ್ಪರರ ಮೇಲೆ ಗೂಬೆ ಕೂರಿಸುವ ಕಾರ್ಯ
ಉದಯರಶ್ಮಿ ದಿನಪತ್ರಿಕೆ
ವರದಿ: ಮಹಾಂತೇಶ ನೂಲಾನವರ
ಸಿಂದಗಿ: ವಕ್ಪ್ ಆಸ್ತಿ ವಿವಾದ ರಾಜ್ಯಾದ್ಯಂತ ಜನಮನದಲ್ಲಿ ಆಕ್ರೋಶ, ಆತಂಕ ಉಂಟುಮಾಡಿದೆ. ಜನ ಸಾಮಾನ್ಯರ, ರೈತರ, ಮಠಗಳ, ಗೋಮಾಳಗಳ, ದೇವಸ್ಥಾನಗಳ, ಬಯಲು ಪ್ರದೇಶಗಳ ಆಸ್ತಿದಾರರಿಗೆ ಅವರಿಗರಿವಿಗಿಲ್ಲದೇ ಪಹಣಿ ಉತಾರಿಯ ಕಾಲಂ ೧೧ರಲ್ಲಿ ವಕ್ಪ್ ಆಸ್ತಿ ಎಂದು ನಮೂದಿಸಲ್ಪಟ್ಟಿದ್ದು ಆತಂಕಕ್ಕೀಡು ಮಾಡಿದೆ. ಇದರ ಪರ ಹಾಗೂ ವಿರೋಧದ ಮಾತುಗಳು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಕೆಸರೆರಚಾಟ, ಒಬ್ಬರು ಇನ್ನೊಬ್ಬರ ಮೇಲೆ ಗೂಬೆ ಕೂರಿಸುವ ಕಾರ್ಯ ನಿರಂತರ ನಡೆದಿದೆ. ಇದರ ಮಧ್ಯ ಮಠಾಧೀಶರ ನೇತೃತ್ವದಲ್ಲಿ ಭಾರತೀಯ ಕಿನಾಸ್ ಸಂಘ, ರೈತ ಸಂಘಗಳು ರೈತರ ಪರವಾಗಿ ಬ್ಯಾಟಿಂಗ್ ನಡೆಸಿವೆ. ಮತ್ತೊಂದೆಡೆ ಕೆಲವು ಮುಸ್ಲಿಂ ನಾಯಕರು ಪತ್ರಿಕಾಗೋಷ್ಠಿ, ಸಭೆಗಳನ್ನು ಆಯೋಜಿಸಿ ವಕ್ಪ್ ಮಂಡಳಿಯು ಹಕ್ಕು ಸಾಧಿಸಲು ನೊಟೀಸ್ ನೀಡಿದ ಆಸ್ತಿಯ ಪರಭಾರೆಯ ಕುರಿತು ಸಮಜಾಯಿಷಿ ನೀಡಿ ತೇಪೆ ಹಚ್ಚಿ ಸರಿದೂಗಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.
೧೯೧೩ರ ಟ್ರಸ್ಟ್ ಕಾಯ್ಕೆ ಮತ್ತು ೧೯೧೩ರ ಮುಸಲ್ಮಾನ ವಕ್ಫ್ ವ್ಯಾಲಿಡೀಟಿ ಕಾಯ್ದೆ ರಚಿಸಿ ಲಿಖಿತವಾಗಿ ಹಾಗೂ ಮೌಖಿಕವಾಗಿ ಧಾರ್ಮಿಕ ಸ್ಥಳಗಳಿಗೆ ಆಸ್ತಿಯನ್ನು ದತ್ತಿ, ದಾನ ಅಂದರೆ ವಕ್ಫ್ ಮಾಡಬಹುದು ಎಂದು ಕಾನೂನು ರಚಿಸಲಾಯಿತು. ಇದರ ಪ್ರಕಾರ ಮುಸ್ಲಿಂ ಸಹೋದರರು ಸಮಾಜದ ಏಳಿಗೆಗಾಗಿ ತಮ್ಮ ಅಥವಾ ಪೂರ್ವಜರಿಂದ ಬಂದ ಆಸ್ತಿಯನ್ನು ಸ್ವಯಂ ಪ್ರೇರಿತವಾಗಿ ದಾನರೂಪದಲ್ಲಿ ಬಿಟ್ಟುಕೊಡಬಹುದು. ಒಟ್ಟಾರೆ ವಕ್ಪ್ನ ಆಸ್ತಿ ದಾನ ರೂಪದಲ್ಲಿ ಬಂದಂತದ್ದು. ಒಮ್ಮೆ ವಕ್ಪ್ ಬೋರ್ಡೀನಲ್ಲಿ ಆಸ್ತಿ ನಮೂದಾದರೆ ಅದನ್ನು ಮರಳಿ ಪಡೆಯಲು ಯಾವುದೇ ಕೋರ್ಟಿನಲ್ಲಿ ದಾವೆ ಹೂಡುವಂತಿಲ್ಲ. ವಕ್ಪ್ ಟ್ರಿಬಿನಲ್ ಬೋರ್ಡ್ಗೆ ತಮ್ಮ ಮೂಲ ದಾಖಲೆಗಳನ್ನು ಹಾಜರುಪಡಿಸಿ ಆಸ್ತಿ ತಮ್ಮದೇ ಎಂಬುದನ್ನು ದೃಢಿಕರಿಸಬೇಕು ಎಂದಿದೆ.
ಅಕ್ರಮವಾಗಿ ರೈತರ, ಮಠಮಾನ್ಯಗಳ, ಸಾರ್ವಜನಿಕರ ಆಸ್ತಿಯ ಮೇಲೆ ಹಕ್ಕು ಸಾಧಿಸಲು ಹೊರಟ ವಕ್ಪ್ ಮಂಡಳಿ ಆಸ್ತಿಗಳ ಕಾಗದ ಪತ್ರಗಳನ್ನು ಹಾಜರುಪಡಿಸಿದರೆ ಅದನ್ನು ಮಾನ್ಯ ಮಾಡುತ್ತದೆ ಎಂಬ ವಾದವೇ ಹಾಸ್ಯಾಸ್ಪದವೆನಿಸುತ್ತದೆ. ತಮ್ಮದಲ್ಲದ ತಪ್ಪಿಗಾಗಿ ಕಾಗದ ಪತ್ರಗಳನ್ನು ಹಿಡಿದುಕೊಂಡು ಇಲಾಖೆಗಳ ಬಾಗಿಲಲ್ಲಿ ಕೋರ್ಟ್ ಕಛೇರಿಗಳ ಬಾಗಿಲನ್ನು ಎಡತಾಕುವ ಕರ್ಮ ರೈತಾಪಿ ವರ್ಗಕ್ಕೆ ಬಂದದ್ದು ವಿಪರ್ಯಾಸವೇ ಸರಿ. ಸಚಿವರು, ಶಾಸಕರು, ಸರಕಾರ ರೈತರ ಜಮೀನುಗಳನ್ನು ಯಾವುದೇ ಕಾಲಕ್ಕೂ ವಶಪಡಿಸಿಕೊಳ್ಳಲು ಬಿಡುವುದಿಲ್ಲ ಎಂಬ ಭರವಸೆ ನೀಡುತ್ತಿದ್ದಾರಾದರೂ ಕಾರಣವಿಲ್ಲದೇ ರೈತರ ಆಸ್ತಿಯ ಮೇಲೆ ವಕ್ಪ್ ತನ್ನ ಹಕ್ಕು ಸಾಧಿಸಲು ಹೊರಟದ್ದಾದರೂ ಏಕೆ? ಈ ತಪ್ಪು ಮಾಡಿದವರಿಗೆ ಹಕ್ಕು ಸಾಧಿಸಲು ಹೊರಟ ವಕ್ಪ್ ಬೋರ್ಡೀನ ಮೇಲೆ ಕಾನೂನು ಕ್ರಮ ಜರುಗಿಸುವವರು ಯಾರು ಎಂಬ ಪ್ರಶ್ನೆ ಜಿಜ್ಞಾಸೆಯಾಗಿಯೇ ಉಳಿದಿದೆ.

“ವಕ್ಪ್ ಬೋರ್ಡ್ ಎಂಬುದು ರೈತರ ಪಾಲಿಗೆ ಕರಾಳ ಬೋರ್ಡ್. ವಕ್ಪ್ ಬೋರ್ಡ್ನಿಂದ ಬಡ ಅಲ್ಪಸಂಖ್ಯಾತರಿಗೆ ಎಳ್ಳುಕಾಳಷ್ಟೂ ಲಾಭವಾಗಿಲ್ಲ. ವಕ್ಪ್ ಆಸ್ತಿ ಬಲಾಢ್ಯರ, ಭ್ರಷ್ಟರ ಅಕ್ಷಯ ಪಾತ್ರೆಯಾಗಿದೆ. ನುಂಗಣ್ಣರಿಗೆ ವರದಾನವಾಗಿರುವ ವಕ್ಪ್ ಬೋರ್ಡ್ ರದ್ದು ಪಡಿಸಬೇಕು. ’ವಕ್ಪ್ ಹಠಾವೊ, ದೇಶ ಬಚಾವೋ’ ಎನ್ನುವಂತಾಗಲಿ.”
– ರಮೇಶ ಭೂಸನೂರ
ಮಾಜಿ ಶಾಸಕರು, ಸಿಂದಗಿ

“ರೈತರ ಆಸ್ತಿಯನ್ನು ಯಾವುದೇ ಕಾಲಕ್ಕೂ ಪರಭಾರೆಯಾಗಲು ನಮ್ಮ ಸರಕಾರ ಬಿಡುವುದಿಲ್ಲ. ಕೆಲವು ಪ್ರಕರಣಗಳು ತಪ್ಪಾಗಿ ನಮೂದಾಗಿಸಿದ್ದು, ಅವುಗಳನ್ನು ರದ್ದು ಪಡಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಈಗಾಗಲೇ ಸೂಚಿಸಿದ್ದಾರೆ. ರೈತರು ಆತಂಕಪಡುವ ಅವಶ್ಯಕತೆಯಿಲ್ಲ.”
– ಅಶೋಕ ಎಂ.ಮನಗೂಳಿ
ಶಾಸಕರು, ಸಿಂದಗಿ

“ಅನಧಿಕೃತವಾಗಿ ವಕ್ಫ್ ಬೋರ್ಡ್ ಸಾರ್ವಜನಿಕರ ಮತ್ತು ರೈತರ ಆಸ್ತಿಯನ್ನು ಕಬಳಿಸಿಕೊಂಡಿದ್ದೇ ಆಗಿದ್ದರೆ ಅನ್ಯಾಯವನ್ನು ಸರಿಪಡಿಸಬೇಕು. ವಕ್ಫ್ ಬಗ್ಗೆ ಜ್ಞಾನವಿಲ್ಲದ ಜಮೀರ ಹಮ್ಮದಖಾನ್ ಚುನಾವಣಾ ಪ್ರಚಾರಕ್ಕಾಗಿ ವಕ್ಪ್ ಅದಾಲತ್ ಮಾಡುವ ಮೂಲಕ ಗೊಂದಲ ಸೃಷ್ಟಿಸಿರುವುದನ್ನು ನೋಡಿದರೆ ಸರಕಾರವೇ ಸಾರ್ವಜನಿಕರ ಆಸ್ತಿ ಅತೀಕ್ರಮಣ ಮಾಡಿದಂತಿದೆ. ಪ್ರಸ್ತುತ ವಿದ್ಯಮಾನಗಳನ್ನು ಗಮನಿಸಿದರೆ ವಕ್ಪ್ ಆಸ್ತಿಯನ್ನು ಭೂಗಳ್ಳರು ಹಾಗೂ ಅತಿಕ್ರಮಣಕಾರರು ಕಬಳಿಸಿಕೊಂಡರೆ ಸರ್ಕಾರ ಅಂಥವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.”
– ದಸ್ತಗೀರ ಮುಲ್ಲಾ
ರಾಜ್ಯ ಪ್ರಧಾನ ಕಾರ್ಯದರ್ಶಿ, ಟಿಪ್ಪು ಕ್ರಾಂತಿಸೇನೆ

” ಭಾರತದ ಸಂವಿಧಾನದ ಪ್ರಕಾರ ಕಾಯ್ದೆ ಜಾರಿಗೆ ಬರಬೇಕು. ಮುಸ್ಲಿಂರಿಗೊಂದು ಬೇರೆ ಕಾನೂನು ಇದು ಸಂವಿಧಾನ ಬಾಹಿರ. ರೈತರ, ಸಾರ್ವಜನಿಕರ ಮನೆ ಮಠದ ಆಸ್ತಿಗಳು ಯಾರದೋ ಪಾಲಾಗುವುದು ಬೇಡ.ಹಾಗೆನಾದರೂ ಆದರೆ ನಾವು ಮಠಾಧೀಶರು ಸುಮ್ಮನಿರುವುದಿಲ್ಲ. ನ್ಯಾಯ ದೊರಕುವವರೆಗೂ ಹೋರಾಟ ಮಾಡುತ್ತೇವೆ.”
– ಅಭಿನವ ರುದ್ರಮುನಿ ಶಿವಾಚಾರ್ಯರು
ಯಂಕಂಚಿ ಶ್ರೀಮಠ
