ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ವ್ಯಕ್ತಿಯ ಸನ್ನಡತೆಯನ್ನು ಜಾರಿ ತರುವುದೇ ಭಗವದ್ಗೀತೆ. ದಾರಿ ತಪ್ಪುವಂತಹ ಯೋಚನಾ ಲಹರಿಯನ್ನು ಸರಿಪಡಿಸಲು ಭಗವದ್ಗೀತೆ ಅತ್ಯವಶ್ಯಕ ಎಂದು ಯಂಕಂಚಿ ಶ್ರೀಮಠದ ಅಭಿನವ ರುದ್ರಮುನಿ ಶಿವಾಚಾರ್ಯರು ಹೇಳಿದರು.
ಪಟ್ಟಣದ ರಾಂಪೂರ ರಸ್ತೆಯಲ್ಲಿರುವ ಪ್ರೇರಣಾ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಶಿರಸಿಯ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಶ್ರೀ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ, ಸಿಂದಗಿ ಭಗವದ್ಗೀತಾ ಅಭಿಯಾನ ಸಮಿತಿ ಹಾಗೂ ಪ್ರೇರಣಾ ಪಬ್ಲಿಕ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಸಹಯೋಗದಲ್ಲಿ ಹಮ್ಮಿಕೊಂಡ ೨೦೨೪-ಭಗವದ್ಗೀತಾ ಅಭಿಯಾನ ಉದ್ಘಾಟನಾ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಈ ವೇಳೆ ಮಾಜಿ ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ ಮಾತನಾಡಿ, ಮಕ್ಕಳಲ್ಲಿ ಸ್ಪಷ್ಟ ಉಚ್ಚಾರಣೆ ಬರಬೇಕೆಂದರೆ ಭಗವದ್ಗೀತೆಯನ್ನು ಓದಬೇಕು. ವಿದ್ಯಾರ್ಥಿಗಳು ಶ್ಲೋಕ. ಪಠಣ ಲಯವಾಗಿ ಅಳವಡಿಸಿಕೊಳ್ಳಬೇಕು. ವಚನದೊಂದಿಗೆ ಮಕ್ಕಳು ಭಗವದ್ಗೀತೆಯನ್ನು ಓದಿ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಸಿಂದಗಿ ಶ್ರೀ ಭಗವದ್ಗೀತಾ ಅಭಿಯಾನ ಸಮಿತಿಯ ಅಧ್ಯಕ್ಷ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ ಮಾತನಾಡಿ, ಶ್ರೀಕೃಷ್ಣ ಪರಮಾತ್ಮ ನಮ್ಮ ಜೀವನಕ್ಕೆ ನೀಡಿದ ಮುಕ್ತಿಯ ಮಾರ್ಗದರ್ಶನ ಅನನ್ಯ. ಈ ಧರ್ಮಗ್ರಂಥದ ಮೂಲಕ ಜೀವನದ ಶ್ರೇಷ್ಠತೆಯನ್ನು ಹೆಚ್ಚು ಮಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.
ಈ ಸಡಗರದಲ್ಲಿ ಭಗವದ್ಗೀತೆಯ ಗ್ರಂಥಗಳನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಯಿತು. ಈ ವೇಳೆ ಸಂಘಟನಾ ಕಾರ್ಯದರ್ಶಿಗಳು ಮಲ್ಲು ಪೂಜಾರಿ ಅಭಿಯಾನದ ಗುರಿ ಹಾಗೂ ಉದ್ದೇಶಗಳನ್ನು ಕುರಿತು ಮಾತನಾಡಿದರು. ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಅಧ್ಯಕ್ಷ ಆರ್.ಡಿ.ಕುಲಕರ್ಣಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯಗುರುಮಾತೆ ಸಾವಿತ್ರಿ ಅಸ್ಕಿ, ಮಹಾದೇವಿ ಬುಕ್ಕಾ, ಪಿ.ಡಿ.ಕುಲಕರ್ಣಿ ಸೇರಿದಂತೆ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳಿದ್ದರು.
ವಿದ್ಯಾರ್ಥಿನಿ ಯಶೋದ ಹಂಚಿನಾಳ ಪ್ರಾರ್ಥಿಸಿದರು. ಶಿಕ್ಷಕ ಸತೀಶ ಕುಲಕರ್ಣಿ ನಿರೂಪಿಸಿದರು. ಶಿಕ್ಷಕ ಸಚಿನ ಮಠಪತಿ ವಂದಿಸಿದರು.

