ಕೋರ್ ಕಮಿಟಿ ಸಭೆಯಲ್ಲಿ ಡಾ.ಮಹಾಂತೇಶ ಬಿರಾದಾರ ಮಾಹಿತಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದಲ್ಲಿ ಡಿಸೆಂಬರ್ 22 ರಂದು ನಡೆಯಲಿರುವ ವೃಕ್ಷೋಥಾನ ಹೆರಿಜೇಟ್ ರನ್ ಈ ಬಾರಿ ಛಾಯಾಚಿತ್ರ ಸ್ಪರ್ಧೆ ಆಯೋಸಲು ನಿರ್ಧರಿಸಲಾಗಿದೆ.
ಬುಧವಾರ ನಗರದಲ್ಲಿ ನಡೆದ ವೃಕ್ಷೋಥಾನ ಹೆರಿಟೇಜ್ ರನ್-2024 ಕೋರ್ ಕಮಿಟಿ ಸಭೆಯಲ್ಲಿ ಮಾತನಾಡಿದ ಡಾ. ಮಹಾಂತೇಶ ಬಿರಾದಾರ ಕಳೆದ ಬಾರಿಗಿಂತಲೂ ಈ ಬಾರಿ ಕಾರ್ಯಕ್ರಮವನ್ನು ಅತ್ಯುತ್ತಮವಾಗಿ ಆಯೋಜಿಸಲು ನಿರ್ಧರಿಸಲಾಗಿದೆ. ಜಲ, ವೃಕ್ಷ, ಶಿಕ್ಷಣ, ಪ್ರಾಚೀನ ಸ್ಮಾರಕ ಸಂರಕ್ಷಣೆ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದರ ಜೊತೆಗೆ ಓಟ ನಡೆಯುವ ದಿನ ಅತ್ತುತ್ತಮ ಛಾಯಾಚಿತ್ರ ಸ್ಪರ್ಧೆ ಏರ್ಪಡಿಸಲಾಗುವುದು. ಈ ಸ್ಪರ್ಧೆಯ ಕುರಿತು ಹೆಚ್ಚಿನ ಮಾಹಿತಿಯನ್ನು ನಂತರ ತಿಳಿಸಲಾಗುವುದು ಎಂದು ಹೇಳಿದರು.
ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ಎಲ್ಲ ಕಡೆಯಿಂದಲೂ ಓಟಗಾರರು ಫೋನ್ ಮೂಲಕ ಮತ್ತು ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ಪಡೆಯುತ್ತಿದ್ದಾರೆ. ವಿಶ್ವದ ಏಳು ಖ್ಯಾತ ಮ್ಯಾರಾಥಾನ್ ಗಳಲ್ಲಿ ಪಾಲ್ಗೊಂಡಿರುವ ಕ್ರೀಡಾಪಟುಗಳೂ ಕೂಡ ಇದರಲ್ಲಿ ಭಾಗವಹಿಸಲಿದ್ದಾರೆ. ನಮ್ಮದು ಪರಿಸರ ಸ್ನೇಹಿ ಮ್ಯಾರಾಥಾನ್ ಆಗಿದ್ದು, ಈ ಹಸಿರು ಮ್ಯಾರಾಥಾನ್ ಜನಮನದಲ್ಲಿ ಸದಾ ಸ್ಮರಣೀಯವಾಗಿಸಲು ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.
ಇದೇ ವೇಳೆ, ನಾನಾ ಸಮಿತಿಗಳ ಪದಾಧಿಕಾರಿಗಳು ತಾವು ನಡೆಸಿರುವ ಸಿದ್ಧತೆಗಳ ಕುರಿತು ಸಭೆಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕೋರ್ ಕಮಿಟಿ ಪದಾಧಿಕಾರಿಗಳಾದ ಡಾ. ಮುರುಗೇಶ ಪಟ್ಟಣಶೆಟ್ಟಿ, ಶಿವನಗೌಡ ಪಾಟೀಲ, ಸಂಕೇತ ಬಗಲಿ, ಸಂತೋಷ ಔರಸಂಗ, ಗುರುಶಾಂತ ಕಾಪಸೆ, ಅಪ್ಪು ಭೈರಗೊಂಡ, ವೀರೇಂದ್ರ ಗುಚ್ಚೆಟ್ಟಿ, ಮಹೇಶ ವಿ. ಶಟಗಾರ, ರಾಜು ಯಲಗೊಂಡ, ಅಮಿತ ಬಿರಾದಾರ, ಸೋಮಶೇಖರ ಸ್ವಾಮಿ, ಪ್ರದೀಪ ಕುಂಬಾರ, ಪ್ರವೀಣ ಚೌರ, ಡಿ. ಕೆ. ತಾವಸೆ, ವೀಣಾ ದೇಶಪಾಂಡೆ, ಉಮೇಶ ಮೆಟಗಾರ, ಜಗದೀಶ ಪಾಟೀಲ, ಶ್ರೀಕಾಂತ ಹಡಲಗೇರಿ ಉಪಸ್ಥಿತರಿದ್ದರು.

