ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಧರ್ಮಗ್ರಂಥಗಳ ಜ್ಞಾನ ಪೀಳಿಗೆಯಿಂದ ಪೀಳಿಗೆಗೆ ನಿರಂತರವಾಗಿ ಸಾಗಿಸುವಲ್ಲಿ ಭಗವದ್ಗೀತಾ ಅಭಿಯಾನ ನಿರಂತರತೆಯನ್ನು ಕಾಯ್ದಕೊಳ್ಳುವ ಅನಿವಾರ್ಯತೆ ಇದೆ ಎಂದು ತಂಗಡಗಿ ಸಿದ್ದಾರೂಢ ಮಠದ ಮಾಧವಾನಂದ ಭಾರತೀ ಸ್ವಾಮೀಜಿಯವರು ನುಡಿದರು.
ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಪವಾಡ ಬಸವೇಶ್ವರ ಆಶ್ರಮದಲ್ಲಿ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಸೋಂದಾ ಸ್ವರ್ಣವಲ್ಲೀ ಸಂಸ್ಥಾನ ಶಿರಸಿ, ತಾಲೂಕಾ ಅಭಿಯಾನ ಸಮಿತಿ ಹಾಗೂ ಚೇತನ ಹಿರಿಯ ಪ್ರಾಥಮಿಕ ಶಾಲೆ ಇವರ ಸಹಯೋಗದಲ್ಲಿ ಭಗವದ್ಗೀತಾ ಅಭಿಯಾನ ಕರ್ನಾಟಕ-೨೦೨೪ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಅವರು ಮಾತನಾಡಿದರು.
ಮಗು ಚಿಕ್ಕವಯಸ್ಸಿನಲ್ಲಿರುವಾಗಲೇ ಸಂಸ್ಕಾರ ಮನೆಯಿಂದ ಪ್ರಾರಂಭವಾಗಬೇಕು. ನೋಡಿ, ಕೇಳಿ, ಮಾಡಿಕಲಿಯಲಿ ಎನ್ನುವ ರೀತಿಯಲ್ಲಿ ಅನ್ವಯಿಸಿಕೊಳ್ಳುವ ಪ್ರವೃತ್ತಿಯಿರುವುದರಿಂದ ಮನೆಯಲ್ಲಿ ತಂದೆ, ತಾಯಿ ಹಾಗೂ ಮನೆಯ ಸದಸ್ಯರ ವರ್ತನೆಯು ಸಂಸ್ಕಾರಭರಿತವಾಗಿರುವುದು ಅವಶ್ಯವಾಗಿದೆ. ನಾವು ನಮ್ಮ ಕಾಯಕವನ್ನು ಮಾಡುವುದೇ ನಿಜವಾದ ದೇವರ ಪೂಜೆ. ಗೀತೆಯ ತತ್ವದ ಪ್ರಸರಣ ನಿರಂತರವಾಗಿ ಸಾಗಬೇಕಾಗಿದೆ. ಮಾನಸಿಕ ಖಿನ್ನತೆಗೆ ಒಳಗಾಗಬಾರದು. ನಮ್ಮ ವಿಚಾರದಲ್ಲಿ ಕಲ್ಮಶ ವಿರಬಾರದು. ಸಮಾಜದಲ್ಲಿ ಗುರುತರವಾದ ಜವಾಬ್ದಾರಿ ಇರುವವರು ಸ್ವಅಧ್ಯಯನ ಮತ್ತು ಸ್ವಅನುಷ್ಠಾನ ಮಾಡಿಕೊಂಡಿರಬೇಕು. ಅಧರ್ಮಕ್ಕೆ ಎಂದೂ ಗೆಲುವಿಲ್ಲ. ಧರ್ಮಕ್ಕೆ ನಿರಂತರ ಗೆಲುವು ಇರುತ್ತದೆ. ಎಲ್ಲದಕ್ಕೂ ಮೊದಲು ಶೃದ್ಧೆಯನ್ನು ಹೊಂದಿರಬೇಕು. ಆಧುನಿಕತೆಗೆ ಮಾರುಹೋಗಬಾರದು ಎಂದರು.
ಪುರಾಣಿಕ ಮಾದೇವ ಶಾಸ್ತ್ರೀಯವರು ಮಾತನಾಡಿ ಭವದ್ಗೀತೆಯನ್ನು ಅರ್ಥೈಸಿಕೊಂಡು ದೃಢವಿಶ್ವಾಸದಿಂದ ನಡೆದಲ್ಲಿ ಜೀವನದಲ್ಲಿ ಬರುವ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳ ಬಹುದಾಗಿದೆ. ಇದು ಸರ್ವಕಾಲಿಕ ಸತ್ಯದ ವಿಚಾರವೇ ಆಗಿದೆ. ಇದಕ್ಕೆ ಸಾಕಷ್ಟು ಸತ್ಯ ನಿದರ್ಶನಗಳಿವೆ. ಭಗವದ್ಗೀತೆಯಲ್ಲಿ ಲೌಖಿಕ ಮತ್ತು ಪಾರಮಾರ್ಥಿಕ ವಿಚಾರವು ಅಡಗಿದೆ. ಮನುಷ್ಯನ ಜೀವನದ ದಿಕ್ಕನ್ನೆ ಬದಲಾಯಿಸುವ ಸಾಮರ್ಥ್ಯ ಗೀತೆಯಲ್ಲಿದೆ. ಧರ್ಮವೆನ್ನುವುದನ್ನ ಅರ್ಥೈಸಿಕೊಂಡಿರಬೇಕು. ಧರ್ಮವೆನ್ನುವುದು ದೊಡ್ಡಮರಗಳಿದ್ದಹಾಗೆ, ಅಲ್ಲಿ ಎಲ್ಲಾ ರೀತಿಯ ಜೀವ ಸಂಕುಲಗಳು ವಾಸಿಸುತ್ತವೆ. ಅದರಂತೆ ಸನಾತನ ಧರ್ಮ ಮಾನವೀಯ ಮೌಲ್ಯವನ್ನು ಎತ್ತಿ ಹಿಡಿಯುವಲ್ಲಿ ತೀರಾ ಮಹತ್ತದ್ದಾಗಿದೆ ಎಂದು ಹೇಳಿದರು.
ಪವಾಡ ಬಸವೇಶ್ವರ ಆಶ್ರಮದ ಚನ್ನಮಲ್ಲಪ್ಪ ಶರಣರು ದೀಪ ಬೆಳಗಿಸಿ ಅಭಿಯಾನವನ್ನು ಉದ್ಘಾಟಸಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಗುರುಮಾತೆ ರಂಜಿತಾ ಮತ್ತು ಜ್ಞಾನ ಭಾರತಿ ವಿದ್ಯಾ ಮಂದಿರ ಶಾಲೆ ಗೀತಗಾಯನ ತಂಡದವರು ಸಾಮೂಹಿಕವಾಗಿ ಭಗವದ್ಗೀತೆಯ ೯ ನೇ ಅಧ್ಯಾಯವನ್ನು ಪಠಣಮಾಡಿದರು.
ಈ ಸಂದರ್ಭದಲ್ಲಿ ಕಡಕೋಳ ಆಶ್ರಮದ ಶೋಭಾತಾಯಿ ಶರಣಮ್ಮ, ದೇವೂರ ಪವಾಡ ಬಸವೇಶ್ವರ ಆಶ್ರಮದ ಮಾತೋಶ್ರೀ ಅಮ್ಮನವರು, ಬನೋಶಿ ಮೌನೇಶ್ವರ ಆಶ್ರಮದ ಮಾತೋಶ್ರೀ ಅಮ್ಮನವರು, ರೂಢಗಿ ಚನ್ನಯ್ಯ ಮಠದ ಶರಣಮ್ಮನವರು, ವಿ.ಎಚ್.ಪಿ ಅಧ್ಯಕ್ಷರಾದ ಎಸ್.ಡಿ.ರಾಂಪೂರ, ಅಭಿಯಾನ ಸಮಿತಿ ಅಧ್ಯಕ್ಷ ಶ್ರೀಶೈಲ ದೊಡಮನಿ, ಆಶ್ರಮದ ಸಂಗಣ್ಣ ಕುಂಬಾರ, ಚೇತನ ಶಾಲೆಯ ಮುಖ್ಯಗುರು ಎಸ್.ಎಸ್.ಪೂಜಾರಿ, ಎಚ್.ಎನ್.ಇಟಗಿ, ಎಸ್.ಎಚ್.ಮುದ್ನಾಳ, ಪಿ. ನಾಗೇಶ, ಬಸನಗೌಡ ಬಿರಾದಾರ, ಸಂಗಮೇಶ ತಳವಾರ, ಸಾವಿತ್ರಿ ನಾಯಕ, ಬಸವರಾಜ ಲಿಂಗದಳ್ಳಿ, ಪ್ರಭಾ ಹೆಬ್ಬಾರ, ಎಸ್.ಬಿ.ರಾಂಪೂರ, ಮಂಜುನಾಥ ಪಡದಾಳಿ, ಅನ್ನಪೂರ್ಣ ನಾಗರಾಳ, ಕಾಶಿಬಾಯಿ ರಾಂಪೂರ, ಮಹಾಂತೇಶ ಹಿರೇಮಠ, ರೂಪಾ ನಾಟಿಕರ, ಬಸವರಾಜ ಅಂಗಡಗೇರಿ, ಸೇರಿದಂತೆ ಇತರರು ಹಾಜರಿದ್ದರು. ಸಂಚಾಲಕ ರಾಮಚಂದ್ರ ಹೆಗಡೆ ಸ್ವಾಗತಿಸಿ ನಿರೂಪಿಸಿದರು. ಪ್ರಮುಖರಾದ ಬಸವರಾಜ ನಂದಿಕೇಶ್ವರಮಠ ವಂದಿಸಿದರು.

