ಗುರು-ಶಿಷ್ಯ ಪರಂಪರೆಯ ಬೆಸುಗೆ | ಮತ್ತಿಷ್ಟು ನವತನದ ಚೈತನ್ಯ | ದೃಶ್ಯಕಾವ್ಯ ಪುಷ್ಟಿಕರವಾಗಿ ಸೃಷ್ಟಿಸಿದ ಕಾಣಿಕೆ
ಉದಯರಶ್ಮಿ ದಿನಪತ್ರಿಕೆ
ವರದಿ: ಗುಲಾಬಚಂದ ಆರ್.ಜಾಧವ
ಚಿಕ್ಕಪಡಸಲಗಿ: ಅಕ್ಷರ ಕಲಿಸಿದ ಗುರುವಿಗೆ ಶಿಷ್ಯ ಬಳಗದ ಸಮೂಹ ಅರಮನೆಯೊಂದನ್ನು ಕಾಣಿಕೆ ರೂಪದಲ್ಲಿ ಕೊಡುಗೆಯಾಗಿ ನೀಡಿ ಔದಾರ್ಯತೆ ಮೆರೆದಿದೆ. ಅದು ಅಂತಿಂಥಹ ಕಾಣಿಕೆ ಅಲ್ಲ! ಮಹಾರಾಜರ ನಾಮಾಂಕಿತದಲ್ಲಿರುವ ಭವ್ಯ ಅರಮನೆ ಕೊಡುಗೆ ಎಂಬುದು ಗಮನಾರ್ಹ !
ಹೌದು! ಈ ಐತಿಹ್ಯಯುಳ್ಳ ಅರಮನೆಯನ್ನೇ ತಮ್ಮ ಮೆಚ್ಚಿನ ಗುರುವಿಗೆ ಕಾಣಿಕೆಯಾಗಿ ನೀಡಿದವರು ಹಳೆಯ ವಿದ್ಯಾರ್ಥಿಗಳು ಎಂಬುದು ಇಲ್ಲಿ ಸತ್ಯ! ಯಾಮಾರಿಸುವ ಕಾಲಘಟ್ಟಿನ ಈ ನವರಂಗಿನ ದುನಿಯಾದಲ್ಲಿ ಅರಮನೆ ಕಾಣಿಕೆ ನೀಡುವರು ಉಂಟೇ? ನಂಬಲೇ ಬೇಕು ! ಗುರು-ಶಿಷ್ಯರ ಪರಂಪರೆಯ ಬೆಸುಗೆಯಲ್ಲಿ ಈ ಪ್ರೀತಿಯ ಅರಮನೆ ಕಾಣಿಕೆ ರೂಪದಲ್ಲಿ ಮೈದೇಳಿದೆ! ಶಹಜಾನ್ ಸವಿನೆನಪಿಗಾಗಿ ತಾಜಮಹಲ್ ಕಟ್ಟಿಸಿದವರ ಸ್ಪೂತಿ೯ಯದುರಿಗಿರುವಾಗ ನಾಲ್ಕಕ್ಷರ ಕಲಿಸಿದ ಗುರುವಿಗೆ ಅರಮನೆಯನ್ನೇ ಕೊಡುಗೆಯಾಗಿ ನೀಡಿದ್ದಾರೆ ಎಂಬುದರಲ್ಲಿ ಅಚ್ಚರಿಯೆನ್ನಿಲ್ಲ! ಪ್ರೀತಿ ಮಾಯೆ- ಅಭಿಮಾನ ಛಾಯೆ ಉಮ್ಮಳಿಸಿದೆ ಇಲ್ಲಿ!
ಸಹೃದಯತೆಯ ಪರಮ ಪವಿತ್ರ “ಗುರು-ಶಿಷ್ಯ” ಪರಂಪರೆಯ ಬಾಂಧವ್ಯಕ್ಕೆ ಮತ್ತಿಷ್ಟು ನವತನದ ಚೈತನ್ಯ ಇಲ್ಲಿನ ಅರಮನೆ ಕಾಣಿಕೆ ದೃಶ್ಯಕಾವ್ಯ ಪುಷ್ಟಿಕರವಾಗಿ ಸೃಷ್ಟಿಸಿದೆ. ಮನೋಚವಾಗಿ ಮಿನುಗಿದೆ!
ಹಳೆ ಶಿಷ್ಯರ ಈ ವೈಶಿಷ್ಟ್ಯಪೂರ್ಣ ಕಾಯಕ ಗಮನ ಸೆಳೆದಿದೆ. ಅವರ ಸಂಸ್ಕಾರಯುತ ಒಳಿತು ಭಾವ ಸಂಪ್ರೀತಿಗೆ ಇಂದಿನ ಆಧುನಿಕ ಕಾಲದಲ್ಲಿ ಪಾತ್ರರಾಗಿರುವ ಗುರು ನಿಜಕ್ಕೂ ಧನ್ಯರು!
ಚಿಕ್ಕಪಡಸಲಗಿ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಜನಮೆಚ್ಚುಗೆ ಪಡೆದು ವಿಶ್ರಾಂತ ಜೀವನೋತ್ಸಾಹ ಅನುಭವಿಸುತ್ತಿರುವ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಅನಂತಪೂರ ಅವರೇ ಹಳೆ ಶಿಷ್ಯರ ಕಲಿಕಾ ಪಯಣದ ಹೃದಯ ಸಾಮ್ರಾಜ್ಯವನ್ನಾಳಿರುವ ಪ್ರೀತಿ,ಪೂಜ್ಯಭಾವದ ಗುರುವಾಗಿದ್ದಾರೆ! ಅದಕ್ಕಾಗಿ ಅವರಿಗೆ ಅರಮನೆ ಕಾಣಿಕೆ ಪ್ರಾಪ್ತಿ! ಓರಿಜನಲ್-ಡುಪ್ಲಿಕೇಟ್ ಆ ಮಾತು ಬೇರೆ! ನೈಜ-ಕೃತಕ ವಿಚಾರ ಬಿಡಿ! ಮೊದಲು ಕೊಡುವ ಉದಾರತೆಯ ಭಾವ ನೋಡಬೇಷ್ಟೇ! ಅಲ್ಲವೇ ?
ಅನಂತಪೂರ ಅವರ ಅನಂತಮಯ ಶೈಕ್ಷಣಿಕ ರಂಗದ ಕಾಯಕಕ್ಕೆ ಶಿಷ್ಯರಿಂದ ಸಂದ ಗೌರವಾಧಾರದ ದ್ಯೋತಕ ರಮ್ಯತೆ, ನಮ್ಯತೆಯ “ಅರಮನೆ ಪ್ರೇಮದ ಕಾಣಿಕೆ” ಇದಾಗಿದೆ.
ಶಿಕ್ಷಕ ವೃತ್ತಿಯ ಅಮೂಲ್ಯತೆ ಪರಿಪಾಲಿಸಿ ಅಸಂಖ್ಯಾತ ಮಕ್ಕಳ ಮನಸ್ಸನ್ನು ಗೆದ್ದಿರುವ ಬಸವರಾಜ ಅನಂತಪೂರ ಕಳೆದ ಕೆಲ ತಿಂಗಳ ಹಿಂದಷ್ಟೇ ವಯೋಸೇವಾ ನಿವೃತ್ತರಾಗಿದ್ದಾರೆ. ಆ ಪ್ರಯುಕ್ತ ಎಸ್ಸೆಸ್ಸೆಲ್ಸಿ 2013-14 ನೇ ಸಾಲಿನ ಹಳೆ ಶಿಷ್ಯರ ಬಳಗ ಸೇರಿಕೊಂಡು ತಮ್ಮ ನೆಚ್ಚಿನ ಗುರುವಿನ ಜಮಖಂಡಿಯಲ್ಲಿರುವ ನಿವಾಸಕ್ಕೆ ತೆರಳಿ ಭಾರತೀಯ ಸಂಸ್ಕೃತಿಯ ಅದರಾತೀಥ್ಯದೊಂದಿಗೆ ಹೃದಯಸ್ಪರ್ಶಿ ಸನ್ಮಾನಿಸಿ ಗೌರವಾರ್ಪಣೆ ಗೈದು ಗುರು ಪ್ರೀತಿ, ವಿಶ್ವಾಸಾರ್ಹ ಕೊಂಡಿ ಗಟ್ಟಿಗೊಳಿಸಿದ್ದಾರೆ. “ಗುರು-ಶಿಷ್ಯರ” ಪವಿತ್ರ ಸನ್ನಡತೆಗೆ ಸಾಕ್ಷಿಯಾಗಿದ್ದಾರೆ. ಅಪರೂಪ, ಆದರ್ಶತನದ ಈ ಮಾದರಿ ನಡೆಯೊಂದಿಗೆ ಧನ್ಯತಾಭಾವದ ಪರವಶತೆಯಲ್ಲಿ “ಸಾಕ್ಷರತೆಯ ಸಮರ್ಥಕರು” ಎಂಬ ಅಕ್ಷರ ಕಲಿಕಾ ಜ್ಞಾನದ ಸಿದ್ದಿಯ ಸಮ್ಮತಿಯನ್ನು ಸಮರ್ಥನೀಯವಾಗಿಸಿದ್ದಾರೆ ಈ ಹಳೆ ವಿದ್ಯಾರ್ಥಿಗಳು !
ಈ ಹಳೆ ಶಿಷ್ಯರು ಅನಂತಪೂರ ಗುರುವಿಗೆ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಲಕ್ಷ್ಮೀ ಅನಂತಪೂರ ದಂಪತಿಗಳಿಗೆ ಶಾಲು ಹೊದಿಸಿ ಸನ್ಮಾನಿಸಿ ಬಿನ್ನವತ್ತಳೆ ನೀಡಿ ಗೌರವಿಸಿದರು “ಓಲ್ಡ್ ಈಸ್ ಗೋಲ್ಡ್- ಗುರು,ಶಿಷ್ಯರ” ಸಂಸ್ಕೃತಿ, ಪರಂಪರೆ ನವ್ಯೋತ್ತರವಾಗಿ ಪ್ರತಿಬಿಂಬಿಸಿ ನಮ್ಯತೆಯಿಂದ ನಮಿಸಿ ನಗೆಭಾವದ ಮಿಂಚಿನಲ್ಲಿ ಸಂತಸ ಹಂಚಿಕೊಂಡರು !
ಈ ವೇಳೆ ಅನಂತಪೂರ ದಂಪತಿಗಳಿಗೆ “ಜಮಖಂಡಿ ಪಟವರ್ಧನ ಮಹಾರಾಜರ ಅರಮನೆ” ಸುಂದರ ಮೂತಿ೯ಯೊಂದನ್ನು ಗುರು ಕಾಣಿಕೆಯ ಗೌರವಾರ್ಥವಾಗಿ ಕೊಡುಗೆ ರೂಪದಲ್ಲಿ ಸಮಪಿ೯ಸಿ ತನ್ಮಯದ ಸಂಪ್ರೇಮ ಶಿಷ್ಯರು ತೋರಿದ್ದಾರೆ. ಈ ಸುಘಳಿಗೆ ಶಿಕ್ಷಣ ಪ್ರಿಯರ ಹೃನ್ಮನ ತಣಿಸಿದೆ. ಗುರು-ಶಿಷ್ಯ ಪರಂಪರೆಯ ನೈತಿಕತೆಯಮೌಲ್ಯ ಹೆಚ್ಚಿಸಿದೆ. ಅನಂತಪೂರ ಗುರುಗಳಿಗೆ ವಿಶ್ರಾಂತ ಜೀವನ ಸುಖ,ನೆಮ್ಮದಿ, ಸಂತಸ, ಸಂತೃಪ್ತಿ, ಸಮೃದ್ಧಿ ನೀಡಲಿ. ತಮ್ಮ ಪ್ರೀತಿಯ ಗುರುಜಿಗಳ ಮನೋಭೀಷ್ಮಗಳು ನೆರವೇರಲಿ ಎಂದು ಶಿಷ್ಯರು ಶುಭ ಹಾರೈಸಿದರು.
ಈ ವೇಳೆ 2013-14 ನೇ ಸಾಲಿನ ಎಸ್ಸೆಸ್ಸೆಲ್ಸಿ ಬ್ಯಾಚಿನ್ ಪ್ರಮುಖ ಹಳೆ ವಿದ್ಯಾರ್ಥಿಗಳಾದ ಮಲ್ಲಿಕಾರ್ಜುನ ಮಠಪತಿ, ರವಿ ಧರಿಗೌಡ, ಮಲಿಕ್ ದಶ್ಯಾಳ, ರಾಜೇಶ ನ್ಯಾಮಗೌಡ, ಮುತ್ತು ಮೇತ್ರಿ, ಭರತೇಶ ಜಮಖಂಡಿ, ಶ್ರೀಧರ ನ್ಯಾಮಗೌಡ, ಶಶಿಧರ ಬಡಿಗೇರ, ರಮೇಶ ಅಂಬಿ, ನಾಗೇಶ ದಾನಗೌಡ, ಚೇತನ ದಾನಗೌಡ, ರಮೇಶ ಹಳ್ಳಿ, ವಿದ್ಯಾರ್ಥಿನಿಯರಾದ ಚಂದನಾ ಸವದಿ, ಅಮೃತಾ ಗುರವ ಹಾಗೂ ಅನಂತಪೂರ ಅವರ ಮಡದಿ ಶ್ರೀಮತಿ ಲಕ್ಷ್ಮೀ ಅನಂತಪೂರ, ಸುಪುತ್ರಿ ಅಪೂವಾ೯ ಅನಂತಪೂರ ಇತರರಿದ್ದರು.
ಹಳೆ ವಿದ್ಯಾರ್ಥಿಗಳ ಉವಾಚ
ಅನಂತಪೂರ ಗುರುಗಳು ನಮ್ಮಲ್ಲಿ ಕೌಶಲ್ಯ, ಮನೋಬಲ, ಹಂಬಲ, ಸನ್ಮಾರ್ಗದಂತ ಸದ್ಗುಣಗಳನ್ನು ಧಾರೆಯರೆದಿದ್ದಾರೆ. ಅವರ ಅಂತಃಶಕ್ತಿ ಅಂತಃಕರಣ ಮಾನವೀಯ ಮೌಲ್ಯಗಳ ಶಕ್ತಿಯುತವಾಗಿದೆ.ಅನಂತಪೂರ ಅವರ ಸಿಸ್ಟಮ್ ಶಿಸ್ತಿನ ಸಂಗಮವಾಗಿದೆ. ನಿವೃತ್ತರಾದರೂ ಇನ್ನೂ ನಮ್ಮ ಗುರುಗಳ ಮೈಂಡ್ ಪವರ್ ಸ್ಟ್ರಾಂಗ್ ಸ್ಟ್ರೀಮ್ ಅಗಿದೆ.ಚೈತನ್ಯದ ಚಿಲುಮೆ ರಾರಾಜಿಸುತ್ತಿದೆ. ಇಂಥ ಗುರುಗಳ ಕೈಯಲ್ಲಿ ವಿದ್ಯಾಜ್ಞಾನ ಪಡೆದಿರುವುದು ನಮ್ಮ ಭಾಗ್ಯ.ಅವರನ್ನು ಗೌರವದಿಂದ, ಉಲ್ಲಾಸ,ಉತ್ಸಾಹದಿಂದ ಗುರುಭಕ್ತಿಯಿಂದ ,ಅಭಿಮಾನದಿಂದ ಸನ್ಮಾನಿಸಿದ್ದು ತಮಗೆಲ್ಲ ಖುಷಿ ತಂದಿದೆ ಎಂದು ಹಳೆ ವಿದ್ಯಾರ್ಥಿಗಳು ಹೇಳಿಕೊಂಡರು.

