ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದ ಅನಿರ್ದಿಷ್ಟಾವಧಿ ಧರಣಿ | ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ಜಿಗಜಿಣಗಿ ಭಾಗಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಾನೂನು ಬಾಹಿರವಾಗಿ ರೈತರ, ಸಂಘ-ಸಂಸ್ಥೆಗಳ, ಮಠ ಮಾನ್ಯಗಳ ಜಮೀನು, ಅಲ್ಲದೇ ಸರ್ಕಾರಿ ಜಮೀನು, ಇತ್ಯಾದಿ ಆಸ್ತಿಗಳ ಉತಾರೆಯಲ್ಲಿ ವಕ್ಪ್ ಆಸ್ತಿ ಎಂದು ಎಂಟ್ರಿ ಮಾಡಿರುವುದನ್ನು ತಕ್ಷಣ ತೆಗೆದು ಹಾಕುವುದು, ವಕ್ಫ್ ಕಾಯ್ದೆಯನ್ನೇ ದೇಶದಿಂದ ಕೊತ್ತೊಗೆಯುವುದು ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಒತ್ತಾಯಿಸಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರ ನೇತೃತ್ವದಲ್ಲಿ ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಹೊರಾಂಗಣದಲ್ಲಿ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿ 3ನೇ ದಿನಕ್ಕೆ ಕಾಲಿರಿಸಿದ್ದು, ಮಂಗಳವಾರ ಜಿಲ್ಲೆಯ ವಿವಿಧ ಗ್ರಾಮಗಳ ರೈತರು, ವಿವಿಧ ಸಮುದಾಯದವರು, ಸಮಘ-ಸಂಸ್ಥೆಯವರು ಬೆಂಬಲ ವ್ಯಕ್ತಪಡಿಸಿದರು.
ಜಿಲ್ಲೆಯ ವಿವಿಧ ಭಾಗಗಳಿಂದ ಧರಣಿ ಸ್ಥಳಕ್ಕೆ ತಂಡೋಪ ತಂಡವಾಗಿ ಆಗಮಿಸಿ, ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ, ರಾಜ್ಯ ಸರ್ಕಾರ ರೈತರ ಜಮೀನನ್ನು ಕಬಳಿಸುವ ಹುನ್ನಾರ ನಡೆಸಿದ್ದು, ಯಾವುದೇ ಕಾರಣಕ್ಕೂ ನಾವು ಅವಕಾಶ ನೀಡುವುದಿಲ್ಲ ಎಂದು ರೈತರು ಎಚ್ಚರಿಕೆ ನೀಡಿದರು.
ವಿವಿಧ ಗ್ರಾಮಗಳ ರೈತ ಮುಖಂಡರು, ರೈತರು, ಪಂಚಮಸಾಲಿ ಸಮಾಜ, ಬಣಗಾರ ಸಮಾಜ, ಮರಾಠಾ ಸಮಾಜದ ಮುಖಂಡರು, ಕರ್ನಾಟಕ ಮಾದಿಗ ಜನ ಸಂಘ ಹೋರಾಟ ಸಮಿತಿ (ರಿ) ಬೆಂಗಲೂರು ಪದಾಧಿಕಾರಿಗಳು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ನವೆಂಬರ್ ೭ ರಂದು ವಿಜಯಪುರ ನಗರಕ್ಕೆ ವಕ್ಫ್ ಕಾಯ್ದೆ ತಿದ್ದುಪಡಿ ಜಂಟಿ ಸಂಸದೀಯ ಸಮಿತಿ (ಜಾಯಿಂಟ್ ಪಾರ್ಲಿಮೆಂಟರಿ ಕಮಿಟಿ) ಚೇರಮನ್ ಜಗದಾಂಬಿಕಾ ಪಾಲ್ ರವರ ತಂಡ ಆಗಮಿಸಲಿದ್ದು, ಅನ್ಯಾಯಕ್ಕೆ ಒಳಗಾದವರ ಜೊತೆ ಚರ್ಚಿಸಿ ಅಹವಾಲು ಸ್ವೀಕರಿಸಲಿದೆ. ಆದ್ದರಿಂದ ರೈತರು ನಮ್ಮ ಕಚೇರಿಗೆ ತಮ್ಮ ಆಸ್ತಿಗಳು ಕಾನೂನು ಬಾಹಿರವಾಗಿ ವಕ್ಫ್ ಆಗಿದ್ದರ ಕುರಿತು ಅಗತ್ಯ ದಾಖಲೆಗಳನ್ನು ತಮ್ಮ ಮನವಿಪತ್ರದೊಂದಿಗೆ ಸಲ್ಲಿಸಲು ತಿಳಿಸಿದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಮಾಜಿ ಶಾಸಕ ರಮೇಶ ಭೂಸನೂರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಸೇರಿದಂತೆ ನಗರವೂ ಸೇರಿದಂತೆ ಜಿಲ್ಲೆಯ ಹಾಲಿ-ಮಾಜಿ ಜನಪ್ರತಿನಿಧಿಗಳು, ರೈತರು, ಮಹಿಳೆಯರು ಭಾಗವಹಿಸಿದ್ದರು.

ಬುತ್ತಿಯೊಂದಿಗೆ ಹೋರಾಟಕ್ಕೆ ರೈತರ ಬೆಂಬಲ
ರೈತರಿಗಾಗಿ ನಡೆಸುತ್ತಿರುವ ಈ ಧರಣಿ ನಿರತ ಹೋರಾಟಗಾರರ ಹಸಿವು ತಣಿಸಲು ಚಡಚಣ ತಾಲ್ಲೂಕಿನ ಹಲಸಂಗಿ ಗ್ರಾಮದ ರೈತ ಬಾಂಧವರಾದ ಸಿದ್ದಾರಾಮ ಕೊಟ್ಟಲಗಿ, ತುಕಾರಾಮ ಬೋಗರ, ವಿಜಯಕುಮಾರ್ ರಾಂಪೂರ, ಬಾಳು ಮದಬಾವಿ, ಗುರುದೇವಿ ತರಡಿ, ರಾಜಶೇಖರ ತಟ್ಟಿಮನಿ ರವರು, 100 ಸಜ್ಜೆ ರೊಟ್ಟಿ, 100 ಜೋಳದ ರೊಟ್ಟಿ, 100 ಜಪಾತಿ, 125 ಸೇಂಗಾ ಹೊಳಿಗೆ, ಒಂದು ಕೆ.ಜಿ ತುಪ್ಪ, 5 ಕೆ.ಜಿ ಉಪ್ಪಿನಕಾಯಿ, 10 ಕೆ.ಜಿ ಹುಳಿಬಾನ, 10 ಕೆ.ಜಿ ಉಳ್ಳಾಗಡ್ಡಿ, ತರಕಾರಿ, ಹಣ್ಣು ಹಾಗೂ ಎರಡು ಬಾಕ್ಸ್ ನೀರಿನ ಬಾಟಲ್ ಗಳೊಂದಿಗೆ ಆಗಮಿಸಿ ಹೋರಾಟಕ್ಕೆ ಬೆಂಬಲ ನೀಡಿದರು. ರೈತರು ಪ್ರೀತಿಯಿಂದ ತಂದ ಊಟವನ್ನು ಧರಣಿ ವೇದಿಕೆಯಲ್ಲೇ ಕೇಂದ್ರ ಸಚಿವರು, ಶಾಸಕರು ಮೊದಲಾದ ಹೋರಾಟಗಾರರು ಸವಿದರು.

“ರೈತರ ಆಸ್ತಿ ಕಬಳಿಸಲು ಹುನ್ನಾರ ನಡೆಸಿರುವ ಈ ಕಾಂಗ್ರೆಸ್ ದಿಂದ ದೇಶಕ್ಕೆ ಒಳ್ಳೆಯದಾಗುವುದಿಲ್ಲವೆಂದು ಡಾ.ಅಂಬೇಡ್ಕರವರು ಹೇಳಿದ್ದರು. ಒಮ್ಮೆ ಆ ಪಕ್ಷದಿಂದ ಹೊರ ಬಂದ ಮೇಲೆ ಮತ್ತೆ ಹೋಗಲಿಲ್ಲ. ವಕ್ಫ್ ಕಾಯ್ದೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗಂಭೀರವಾಗಿ ಕೆಲಸ ನಡೆಸಿದೆ. ಜಗತ್ತಿನ ಯಾವುದೇ ಶಕ್ತಿ ಈ ತಿದ್ದುಪಡಿಗೆ ವಿರೋಧ ಮಾಡಿದರೂ ತಿದ್ದುಪಡಿ ತಂದೇ ತರುವುದಾಗಿ ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ.”
– ಬಸನಗೌಡ ಪಾಟೀಲ, ಯತ್ನಾಳ
ಶಾಸಕರು, ವಿಜಯಪುರ

