ಸಂಪುಟ ಸಚಿವರಿಗೆಲ್ಲ ಉಪಚುನಾವಣೆ ಉಸ್ತುವಾರಿ | ಆಡಳಿತ ಯಂತ್ರ ಸ್ಥಗಿತ | ಬೆಳೆ ಪರಿಹಾರ ಬಿಡುಗಡೆಗೆ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ಕಾಂಗ್ರೆಸ್, ಬಿಜೆಪಿ ನಾಯಕರು ವಕ್ಫ್ ಬೋರ್ಡ್ ಆಸ್ತಿ ವಿವಾದವನ್ನು ಜ್ವಲಂತವಾಗಿರಿಸಿ ರಾಜಕೀಯ ಲಾಭ ಪಡೆಯುವ ದುರಾಲೋಚನೆ ಬಿಡಲಿ, ರೈತರಿಗೆ ನ್ಯಾಯ ಒದಗಿಸುವ ಕೆಲಸ ಮಾಡಲಿ ಎಂದು ವಿಜಯಪುರ ಜಿಲ್ಲಾಧ್ಯಕ್ಷ ಭೋಗೇಶ್ ಸೋಲಾಪುರ್ ಆಗ್ರಹಿಸಿದರು.
ನಗರದಲ್ಲಿ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದ ಅವರು, ವಕ್ಫ್ ಆಸ್ತಿ ವಿವಾದವನ್ನು ಜ್ವಲಂತವಾಗಿರಿಸಿ ರಾಜಕೀಯ ಲಾಭ ಪಡೆಯಲು ಎರಡು ಪಕ್ಷಗಳು ಹವಣಿಸುತ್ತಿವೆ. ವಕ್ಫ್ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಕಾಲಕ್ಕನುಗುಣವಾಗಿ ನವೀಕರಿಸದೆ ಗೊಂದಲಗಳನ್ನು ಸೃಷ್ಟಿಸಲಾಗಿದೆ. ರಾಜ್ಯದಲ್ಲಿ ಅನೇಕ ಸಮಸ್ಯೆಗಳಿವೆ, ಸಂಪುಟ ಸಚಿವರಿಗೆಲ್ಲ ಉಪಚುನಾವಣೆ ಉಸ್ತುವಾರಿ ಹೊರಿಸಲಾಗಿದೆ. ರಾಜ್ಯದ ಆಡಳಿತ ಯಂತ್ರವೇ ಸ್ಥಗಿತಗೊಂಡಿದೆ. ಆದರೆ ಇದನ್ನು ವಕ್ಫ್ ಬೋರ್ಡ್ ಆಸ್ತಿ ವಿವಾದದ ಮೂಲಕ ಮರೆ ಮಾಚಲು ಪ್ರಯತ್ನಗಳು ನಡೆಯುತ್ತಿವೆ. ಸಚಿವ ಜಮೀರ್ ಅಹ್ಮದ್ ಖಾನ್ ಪರಿಸ್ಥಿತಿ ಅವಲೋಕಿಸಿ ರೈತರಿಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡಬೇಕೆ ವಿನಃ ಅಲ್ಪಸಂಖ್ಯಾತರನ್ನು ಎತ್ತಿಕಟ್ಟುವ ಕೆಲಸ ಮಾಡಬಾರದು ಎಂದು ಆಕ್ರೋಶ ಹೊರಹಾಕಿದರು.
ವಿಜಯಪುರದಲ್ಲಿ ರೈತರು ನೋಟಿಸ್ ಪಡೆದಿರುವ ಹಿನ್ನಲೆಯಲ್ಲಿ ಪಹನಿಯಲ್ಲಿ ಇಂದಿಕರಿಸಿದ ವಕ್ಫ್ ಹೆಸರನ್ನು ಸರ್ಕಾರ ತೆಗೆದು ಹಾಕಬೇಕು. ನಮ್ಮ ರೈತರಿಗೆ ತಮ್ಮಜಾಗ ಕಳೆದುಕೊಳ್ಳುವ ಭಯ ಶುರುವಾಗಿದ್ದು, ಸಚಿವರು ಕೂಡಲೇ ಆ ರೈತರ ಜೊತೆ ಮಾತನಾಡಿ, ಅವರ ಆತಂಕ ದೂರ ಮಾಡುವ ಕೆಲಸ ಮಾಡಲಿ. ಇಂತಹ ವಿವಾದಗಳು ಮುಂದೆ ಬರದಂತೆ ನೋಡಿಕೊಳ್ಳಲು ಮಾನ್ಯ ಸಿದ್ದರಾಮಯ್ಯ ಸರ್ಕಾರ ಕ್ರಮ ವಹಿಸಲಿ. ಅತಿವೃಷ್ಠಿಯಿಂದ ರಾಜ್ಯದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ರಾಜ್ಯ ಮತ್ತು ಕೇಂದ್ರ ಸರ್ಕಾರ ರೈತರಿಗೆ ನೆರವು ನೀಡಬೇಕು. ಯಾವ ರೈತರು ಬೆಳೆ ಕಳೆದುಕೊಂಡಿದ್ದಾರೋ ಅವರಿಗೆ ಕೂಡಲೇ ಪರಿಹಾರದ ಹಣ ಬಿಡುಗಡೆ ಮಾಡಲು ಕ್ರಮ ವಹಿಸಲಿ ಎಂದು ಭೋಗೇಶ್ ಸೋಲಾಪುರ್ ಒತ್ತಾಯಿಸಿದ್ದಾರೆ.

