ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಘಟಕವು ತಲೆ-ತಲಾಂತರಗಳಿಂದ ಉಳುಮೆ ಮಾಡಿಕೊಂಡು ಬರುತ್ತಿರುವ ರೈತ ಬಾಂಧವರ ಜಮೀನುಗಳ ಪಹಣಿಯಲ್ಲಿ ಕರ್ನಾಟಕ ವಕ್ಪ್ ಮಂಡಳಿ ಎಂದು ನಮೂದಿಸುತ್ತಿರುವದನ್ನು ಸರ್ಕಾರ ರದ್ದುಪಡಿಸಬೇಕು. ವಕ್ಪ್ ಕಾಯ್ದೆಯನ್ನು ರದ್ದು ಪಡಿಸಬೇಕೆಂದು ಆಗ್ರಹಿಸಿ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಅವರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ರೈತ ಬಾಂಧವರು ಮೆರವಣಿಗೆ ಮೂಲಕ ತಹಸೀಲ್ದಾರ ಕಚೇರಿಗೆ ಆಗಮಿಸಿ ಕೆಲ ಹೊತ್ತು ಧರಣಿ ನಡೆಸಿ ವಕ್ಪ್ ಕಾಯ್ದೆ ವಿರುದ್ಧ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕಾಧ್ಯಕ್ಷ ವಿನೋದ ಪವಾರ ಮಾತನಾಡಿ, ರೈತರ ಜಮೀನುಗಳ ಪಹಣಿಯ ಹಕ್ಕುಗಳ ಕಾಲಂನಲ್ಲಿ ಕರ್ನಾಟಕ ವಕ್ಪ್ ಮಂಡಳಿ ಹೆಸರು ನಮೂದಿಸುವ ಮೂಲಕ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಯುತ್ತಿದೆ. ರೈತರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಗಟ್ಟಲು ವಕ್ಪ್ ಮಂಡಳಿಯ ೧೯೯೫ ರ ಕಾಯ್ದೆಯನ್ನು ರದ್ದುಪಡಿಸಬೇಕು. ಇದು ಸಮಾನತೆ, ಏಕತೆ, ನ್ಯಾಯದ ತತ್ವಗಳಿಗೆ ನೇರ ಸಂಘರ್ಷಕ್ಕಿಡು ಮಾಡಿದಂತಾಗಿದೆ. ರೈತರ ಅನುಮತಿಯಿಲ್ಲದೇ ರೈತರ ಜಮೀನುಗಳ ಪಹಣಿಗಳಲ್ಲಿ ಕರ್ನಾಟಕ ವಕ್ಪ್ ಮಂಡಳಿಯ ಆಸ್ತಿಯೆಂದು ನಮೂದಿಸುತ್ತಿರುವದು ರೈತರಿಗೆ ಕೊಡಲಿ ಪೆಟ್ಟು ನೀಡಿದಂತದಾಗಿದೆ. ಇದನ್ನು ಸರ್ಕಾರ ಸರಿಪಡಿಸಿ ರೈತರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
ಧರಣಿಯಲ್ಲಿ ಆನಂದ ಲಮಾಣಿ, ಶಿವರಾಜ ಲಮಾಣಿ, ಸಚೀನ ಚವ್ಹಾಣ, ಪಿಂಟು ಲಮಾಣ, ಮೀಟು ಜಾಧವ, ಶ್ರೀಕಾಂತ ರಾಠೋಡ, ಕಾಶೀನಾಥ ರಾಠೋಡ, ಸಾಗರ ಚವ್ಹಾಣ, ರಮೇಶ ರಾಠೋಡ, ಕೃಷ್ಣಾ ಚವ್ಹಾಣ, ಮೋಹನ ರಾಠೋಡ ಇತರರು ಇದ್ದರು.

