ವಿಜಯಪುರದ ಪಿಡಿಜೆ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಭಗವದ್ಗೀತಾ ಅಭಿಯಾನಕ್ಕೆ ಚಾಲನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಶಿಕ್ಷಣದಲ್ಲಿ ಆಧ್ಯಾತ್ಮಿಕ ಕೊರತೆ ಪರಿಣಾಮ ಅನೇಕ ವಿದ್ಯಾವಂತರು ಆತಂಕವಾದಿಗಳಾಗುತ್ತಿದ್ದಾರೆ, ನೈತಿಕತೆ ಪತನವಾಗುತ್ತಿದೆ, ಹೀಗಾಗಿ ಅಪರಾಧಿಕ ಮನೋಸ್ಥಿತಿ ಬಾರದಂತೆ ಮಾಡಲು ಶಿಕ್ಷಣದಲ್ಲಿ ಆಧ್ಯಾತ್ಮಿಕತೆಯ ಸ್ಪರ್ಶ ಅಗತ್ಯವಾಗಿದೆ ಎಂದು ಶಿರಸಿಯ ಶಂಕರಾಚಾರ್ಯ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮೀಜಿ ಹೇಳಿದರು.
ವಿಜಯಪುರದ ಪಿಡಿಜೆ ಶಿಕ್ಷಣ ಸಂಸ್ಥೆ ಆವರಣದಲ್ಲಿ ಶ್ರೀ ಸರ್ವಜ್ಞೇನಂದ್ರ ಸರಸ್ವತಿ ಪ್ರತಿಷ್ಠಾನ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಭಗವದ್ಗೀತಾ ಅಭಿಯಾನಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಶ್ರೀಗಳು, ಆತಂಕವಾದಿಗಳ ಶೈಕ್ಷಣಿಕ ಹಿನ್ನೆಲೆ ನೋಡಿದರೆ ಎಲ್ಲರೂ ಉನ್ನತ ಪದವಿ ಪಡೆದವರಾಗಿದ್ದಾರೆ, ಶಿಕ್ಷಣದಲ್ಲಿ ಆಧ್ಯಾತ್ಮ ಹಾಗೂ ಸಂಸ್ಕಾರಗಳ ಕೊರತೆ ಎದ್ದು ಕಾಣುತ್ತಿದೆ ಎಂದರು.
ಇಂದು ನೈತಿಕತೆಯ ಪತನ ಉದ್ದಗಲಕ್ಕೂ ಕಂಡು ಬರುತ್ತಿದೆ, ಪ್ರಾಮಾಣಿಕರ ಸಂಖ್ಯೆ ವಿರಳವಾಗುತ್ತಿದೆ, ಅಪರಾಧಿಕ ಪ್ರಕರಣಗಳು ಹೇರಳವಾಗುತ್ತಿವೆ, ಒಂದು ವರದಿ ಪ್ರಕಾರ ೧ ಲಕ್ಷ ಮಹಿಳೆಯರು ನಾಪತ್ತೆಯಾಗುತ್ತಾರೆ ಎಂದರೆ ಎಷ್ಟೊಂದು ನೋವಿನ ಸಂಗತಿ, ಯಾರೊಬ್ಬರು ಅಪರಾಧ ಮನೋಸ್ಥಿತಿಯಲ್ಲಿ ತೊಡಗದಂತೆ ಮಾಡುವುದು ಅವಶ್ಯವಾಗಿದೆ, ಹದಗೆಟ್ಟಿರುವ ಮನುಷ್ಯನ ಮನಸ್ಥಿತಿ ಸರಿಯಾಗಲು ಭಗವದ್ಗೀತೆಯೇ ಪರಿಹಾರ ಎಂದರು.
ಈ ಎಲ್ಲ ಒತ್ತಡ ನಿವಾರಣೆ, ಆಧ್ಯಾತ್ಮಿಕ ಪಾಠ, ಸಂಸ್ಕಾರಗಳ ಬೋಧನೆ ಮೊದಲಾದ ಸದುದ್ದೇಶಗಳಿಂದ ಈ ಅಭಿಯಾನ ಸಂಘಟಿಸಲಾಗಿದೆ ಎಂದರು.
ಸರ್ವಜ್ಞ ವಿದ್ಯಾವಿಹಾರ ಪೀಠದ ಕುಲಪತಿ ಪಂ.ಮಧ್ವಾಚಾರ್ಯ ಮೊಕಾಶಿ ಸಾನಿಧ್ಯ ವಹಿಸಿದ್ದರು.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ಹಾಗೂ ಮಾಜಿ ಕರ್ನಾಟಕ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ ರಮೇಶ ಜಿಗಜಿಣಗಿ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ, ಅಭಿಯಾನದ ಕಾರ್ಯಾಧ್ಯಕ್ಷ ಉಮೇಶ ನವ, ಗೌರವಾಧ್ಯಕ್ಷ ಅರುಣ ಸೋಲಾಪೂರಕರ, ಶ್ರೀ ಹರಿ ಗೊಳಸಂಗಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕುಚಬಾಳ, ಶ್ರೀಹರ್ಷಗೌಡ ಪಾಟೀಲ, ಗೋಪಾಲ್ ಕಟ್ಕಾಂಬಳೆ ಕಾಸುಗೌಡ ಬಿರಾದಾರ, ಉಮೇಶ ವಂದಾಲ, ಅಶೋಕ ಅಲ್ಲಾಪೂರ, ವಿಜಯ ಜೋಶಿ, ವಿಕಾಸ ಪದಕಿ ಮೊದಲಾದವರು ಉಪಸ್ಥಿತರಿದ್ದರು.
ವಕ್ಫ್ ಹೋರಾಟಕ್ಕೆ ನೈತಿಕ ಬೆಂಬಲ
ವಕ್ಪ್ ವಿವಾದ ಸೃಷ್ಟಿಯಾಗಬಾರದಿತ್ತು, ರೈತರಿಗೆ ವಕ್ಫ್ ವಿಷಯವಾಗಿ ರೈತರಿಗೆ ಅನ್ಯಾಯವಾಗಿದೆ, ಹೀಗಾಗಿ ರೈತರ ಅನ್ಯಾಯದ ವಿರುದ್ದ ನಡೆಯುತ್ತಿರುವ ಹೋರಾಟಕ್ಕೆ ನಮ್ಮ ನೈತಿಕ ಬೆಂಬಲವಿದೆ ಎಂದು ಶಿರಸಿಯ ಶಂಕರಾಚಾರ್ಯ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮೀಜಿ ಹೇಳಿದರು.
ಭಗವದ್ಗೀತೆಯೇ ಎಲ್ಲದಕ್ಕೂ ಸಂಜೀವಿನಿ
” ಕಷ್ಟಗಳು ಬಂದಾಗ, ಜೀವನದಲ್ಲಿ ಜಿಗುಪ್ಸೆಯಾದಾಗ, ಜೀವನದಲ್ಲಿ ನಿರಾಶೆಯಾದಾಗ ಸಂಜೀವಿನಿ ರೂಪದಲ್ಲಿ ಬರುವುದೇ ಭಗವದ್ಗೀತೆ, ಎಲ್ಲ ವಲಯದಲ್ಲೂ ಏಳು ಬೀಳು ಸಹಜ. ಯತ್ನಾಳರ ಯುಗಾಂತ್ಯ ಎಂದು ಅನೇಕರು ಹೇಳಿದರು, ಮಾಧ್ಯಮಗಳು ಸಹ ಇದನ್ನು ಬಿಂಬಿಸಿದವು, ನಾನು ಸಹ ಆಗ ಹತಾಶೆಯಾಗಿ ಅನೇಕ ಬಾರಿ ಕಣ್ಣೀರು ಸುರಿಸುತ್ತಿದ್ದೆ, ದಿ.ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ಕೆಲಸ ಮಾಡಿದ ನಾನು ರಾಜಕೀಯ ಜೀವನ ಮುಗಿಯಿತು ಎಂದು ನೋವು ಅನುಭವಿಸಿದೆ, ಆಗ ರಾಮಾಯಣ, ಮಹಾಭಾರತ ವೀಕ್ಷಿಸಿದೆ, ಪುನಃ ಚೈತನ್ಯ ಬಂತು.”
– ಬಸನಗೌಡ ಪಾಟೀಲಟ ಯತ್ನಾಳ
ವಿಜಯಪುರ ನಗರ ಶಾಸಕ

