ತಂಪ್ಹೊತ್ತಿನಲ್ಲಿ ಸ್ಮರಣಿಯರು ದಿ. ಎಂ.ಸಿ.ಮನಗೂಳಿ | ಆಧುನಿಕ ಭಗೀರಥನ ಮೂರ್ತಿ ಅನಾವರಣ |
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆ ಎಸ್ಟಿತ್ತೆಂದರೆ ಇಲ್ಲಿನ ಹುಡುಗರಿಗೆ ಮದುವೆಯಾಗಲು ಕನ್ಯಾ ಕೊಡದಂತಹ ಸ್ಥಿತಿಯೊಂದಿತ್ತು. ಇಂತಹ ಹಣೆ ಪಟ್ಟಿಯನ್ನು ಕಾಯಂ ಆಗಿ ಹೋಗಲಾಡಿಸಿ ಶಾಶ್ವತ ಕುಡಿವ ನೀರಿನ ಬವಣೆಯನ್ನು ನೀಗಿಸಿ ಆಧುನಿಕ ಭಗೀರಥ ಎಂಬ ಕೀರ್ತಿಗೆ ಭಾಜನರಾದ ತಂಪ್ಹೊತ್ತಿನಲ್ಲಿ ಸದಾ ಸ್ಮರಿಸುವ ಮಹಾನುಭಾವರೆಂದರೆ ಅದು ಎಂ.ಸಿ.ಮನಗೂಳಿಯವರು ಎಂದು ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.
ಪಟ್ಟಣದ ತಾಲೂಕು ಶಿಕ್ಷಣ ಪ್ರಸಾರಕ ಮಂಡಳಿಯ ಮನಗೂಳಿ ಆಯುರ್ವೇದ ಮಹಾವಿದ್ಯಾಲಯದ ಆವರಣದಲ್ಲಿ ಮಾಜಿ ಸಚಿವ ದಿ.ಎಂ.ಸಿ.ಮನಗೂಳಿ ಅವರ ಪುತ್ಥಳಿ ಅನಾವರಣ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ನಗರವನ್ನೊಮ್ಮೆ ಸುತ್ತಿಕೊಂಡು ಬಂದರೆ ಮನಗೂಳಿ ಅವರ ಅಭಿವೃದ್ದಿ ಕಾರ್ಯಗಳು ಮಾತನಾಡುತ್ತವೆ ಎಂದರು.
ಈ ವೇಳೆ ತಾಶಿಪ್ರ ಮಂಡಳಿಯ ನಿರ್ದೇಶಕ ಶಿವಪ್ಪಗೌಡ ಬಿರಾದಾರ ಮಾತನಾಡಿ, ಶಕ್ತಿ ಇದ್ದಾಗ ದುಡಿಬೇಕು, ಧನ ಸಂಪತ್ತಿದ್ದಾಗ ದಾನ-ಧರ್ಮ ಮಾಡಬೇಕು, ಅಧಿಕಾರವಿದ್ದಾಗ ಪ್ರಾಮಾಣಿಕವಾಗಿ ಜನ ಸೇವೆ, ಅಭಿವೃದ್ಧಿ ಕಾರ್ಯ ಮಾಡಬೇಕು ಎನ್ನುವ ಅವರ ಉದಾತ್ತ ಧ್ಯೇಯವನ್ನು ಪರಿಪಾಲಿಸಿಕೊಂಡು ಬಂದಿರುವ ಅವರ ಪುತ್ರ ಅಶೋಕ ಮನಗೂಳಿ ಅವರು ಕೂಡಾ ಅಷ್ಟೇ ಕ್ರಿಯಾಶೀಲ ವ್ಯಕ್ತಿಯಾಗಿದ್ದು, ಕ್ಷೇತ್ರಾದ್ಯಂತ ಆಲಮೇಲ ತೋಟಗಾರಿಕಾ ಕಾಲೇಜು, ಕಡಣಿ ಬ್ಯಾರೇಜ್, ಪಟ್ಟಣದ ಅಲಂಕಾರಿಕ ಬೀದಿ ದೀಪಗಳು, ರಸ್ತೆ ವಿಭಜಕಗಳಲ್ಲಿ ಸಾಲು ಮರಗಳು, ಟ್ರೀ ಪಾರ್ಕ್ ನಿರ್ಮಾಣದಂತಹ ಅನೇಕ ಅಭಿವೃದ್ಧಿಪರ ಶಾಶ್ವತ ಯೋಜನೆಗಳನ್ನು ಜಾರಿಗೊಳಿಸಿದ ಕೀರ್ತಿ ಪ್ರಸ್ತುತ ಶಾಸಕರಿಗೆ ಸಲ್ಲುತ್ತದೆ. ಈ ಭಾಗದ ನೀರಾವರಿ ಹರಿಕಾರ, ಅಪರೂಪದ ಸರಳ ಸಜ್ಜನಿಕೆಯ ರಾಜಕಾರಣಿಯಾದ ಎಂ.ಸಿ.ಮನಗೂಳಿ ಅವರು ತಮ್ಮೊಡನೆ ಇತರರನ್ನು ಕೈಹಿಡಿದು ಕರೆದೊಯ್ಯುವ ಆತ್ಮೀಯತೆ ಸ್ವಭಾವವನ್ನು ಹೊಂದಿದ್ದರು ಎಂದರು.
ಈ ವೇಳೆ ಊರನ ಹಿರಿಯ ಮಠದ ಶಿವಾನಂದ ಶಿವಾಚಾರ್ಯರು, ರಾಜ್ಯ ಕೃಷಿ ಇಲಾಖೆಯ ನಿರ್ದೇಶಕ ಪರವೇಜ್ ಬಂಥನಾಳ, ಡಾ.ಅರವಿಂದ ಮನಗೂಳಿ ವೇದಿಕೆಯ ಮೇಲಿದ್ದರು.
ಕಾರ್ಯಕ್ರಮದಲ್ಲಿ ಶಾಸಕ ಅಶೋಕ ಮನಗೂಳಿ, ಡಾ.ಶಾಂತವೀರ ಮನಗೂಳಿ, ಡಾ.ಸಂಧ್ಯಾ ಮನಗೂಳಿ, ನಾಗರತ್ನ ಮನಗೂಳಿ, ಡಾ.ಚೆನ್ನವೀರ ಮನಗೂಳಿ, ಭರತ ಮನಗೂಳಿ, ಪುರಸಭೆ ಉಪಾಧ್ಯಕ್ಷ ರಾಜಣ್ಣ ನಾರಾಯಣಕರ, ಎಂ.ಎಂ.ಹಂಗರಗಿ, ಮಹಾನಂದ ಬಮ್ಮಣ್ಣಿ, ಸುನಂದಾ ಯಂಪುರೆ, ಶಶಿಕಲಾ ಅಂಗಡಿ, ಪ್ರತಿಭಾ ಚಳ್ಳಗಿ, ಸಂಗೀತಾ ತಿಕೋಟಿ, ಸಿದ್ದು ಮಲ್ಲೇದ, ಕುಮಾರ ಬಗಲಿ, ಎನ್.ವ್ಹಿ.ಕುಲಕರ್ಣಿ, ಸಂಗು ಬಿರಾದಾರ, ಸತೀಶ ಬಸರಕೋಡ, ಮನಗೂಳಿ ಪರಿವಾರ ಸೇರಿದಂತೆ ಹಲವರು ಇದ್ದರು.
ಪ್ರಾಚಾರ್ಯ ಎ.ಆರ್.ಹೆಗ್ಗಣದೊಡ್ಡಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸಿದ್ದಲಿಂಗ ಕಿಣಗಿ ನಿರೂಪಿಸಿ ವಂದಿಸಿದರು. ಡಾ.ಪ್ರಕಾಶ ಮೂಡಲಗಿ ಪ್ರಾರ್ಥಿಸಿದರು.

“ತಾಲೂಕಿನ ಜನರ ಹಾಗೂ ಸಾರಂಗಮಠದ ಭಕ್ತಾದಿಗಳ ಬಹುದಿನದ ಕನಸಾಗಿದ್ದ ಪಟ್ಟಣದ ಕೇಂದ್ರ ಬಸ್ ನಿಲ್ದಾಣಕ್ಕೆ ಲಿಂ.ಚೆನ್ನವೀರ ಮಹಾಸ್ವಾಮಿಗಳ ನಾಮಕರಣ ಮಾಡಲು ನಿಶ್ಚಯಿಸಿದ್ದು ಅತ್ಯಂತ ಸಂತಸದ ಸಂಗತಿ. ಚೆನ್ನವೀರ ಶ್ರೀಗಳ ಹೆಸರನ್ನು ಇಡುವಲ್ಲಿ ಅತ್ಯಂತ ಮುತುವರ್ಜಿ ವಹಿಸಿ ಕಾರ್ಯರೂಪಕ್ಕೆ ತರುವಲ್ಲಿ ಮುಖ್ಯ ಪಾತ್ರಧಾರಿ ಶಾಸಕ ಅಶೋಕ ಮನಗೂಳಿಯವರು ಅಭಿನಂದನಾರ್ಹರು. ನ.೨೭ರಂದು ಉಜ್ಜಯಿಸಿ ಪೀಠದ ಜಗದ್ಗುರು ಸಿದ್ದಲಿಂಗರಾಜ ದೇಶಿಕೇಂದ್ರ ಶ್ರೀಗಳ ಅಮೃತ ಹಸ್ತದಿಂದ ಇದರ ಅನಾವರಣ ನೆರವೇರಲಿದೆ.”
– ಡಾ.ಪ್ರಭುಸಾರಂಗದೇವ ಶಿವಾಚಾರ್ಯರು
ಸಾರಂಗಮಠದ ಪೀಠಾಧಿಪತಿಗಳು

“ದಿ.ಎಂ.ಸಿ.ಮನಗೂಳಿ ಅವರು ಸಾರ್ವಜನಿಕ ವ್ಯಕ್ತಿ. ಎರಡು ಬಾರಿ ಸಚಿವರಾಗಿ ರಾಜ್ಯಾದ್ಯಂತ ಅಭಿವೃದ್ಧಿಪರ ಕಾರ್ಯದಿಂದ ಹೆಸರುವಾಸಿಯಾದವರು. ಇಂತಹ ಮಹಾನ್ ವ್ಯಕ್ತಿಯ ಪುತ್ಥಳಿಯನ್ನು ಮುಖ್ಯ ರಸ್ತೆಯಲ್ಲಿ ವೃತ್ತ ನಿರ್ಮಿಸಿ ಮೂರ್ತಿ ಪ್ರತಿಷ್ಠಾಪಿಸಬೇಕು ಎನ್ನುವುದು ಸಮಸ್ತ ಜನತೆಯ ಒತ್ತಾಸೆ.”
– ಎ.ಆರ್.ಹೆಗ್ಗನದೊಡ್ಡಿ
ಪ್ರಾಚಾರ್ಯರು, ಸಿಂದಗಿ

