ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ತಾಲೂಕಿನ ನಾಲವಾಡ ಬಳಿಯ ಅಮರೇಶ್ವರ ದೇವಸ್ಥಾನದ ಹತ್ತಿರ ನಿಂತಿರುವ ಚಿಮ್ಮಲಗಿ ಏತ ನೀರಾವರಿ ಕಾಮಗಾರಿ ಪೂರ್ಣಗೊಳಿಸುವಂತೆ ಈ ಹಿಂದೆ ಹೋರಾಟ ನಡೆಸಿದ್ದ ಹೋರಾಟಗಾರ ಶಿವಾನಂದ ವಾಲಿ ಶೀಘ್ರವಾಗಿ ಕಾಮಗಾರಿ ಆರಂಭಿಸದಿದ್ದರೆ ಆಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕಳೆದ ಜೂನ್ ನಲ್ಲಿ ಈ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಹಲವು ರೈತರ ಬೆಂಬಲದೊಂದಿಗೆ ಉಗ್ರ ಹೋರಾಟ ನಡೆಸಲಾಗಿತ್ತು. ಹೋರಾಟದ ವೇಳೆ ಲಿಖಿತ ಭರವಸೆ ನೀಡಿದ ಅಧಿಕಾರಿಗಳು ಇತ್ತ ಮೂಸಲು ಬಂದಿಲ್ಲ. ರೈತರ ಸಮಸ್ಯೆ ಈ ಬೇಜವಾಬ್ದಾರಿಯುತ ಅಧಿಕಾರಿಗಳಿಗೆ ಅರ್ಥವಾಗಲ್ಲ. ಹಾಗಾಗಿ ಈ ಬಾರಿ ಕಾಮಗಾರಿ ಚಾಲನೆಯಾಗುವವರೆಗೂ ಸಮಸ್ಯೆ ಎದುರಿಸುತ್ತಿರುವ ರೈತರ ಸಮೇತ ನ೧೮ ರಿಂದ ಅಮರೇಶ್ವರ ದೇವಸ್ಥಾನದ ಆವರಣದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಪ್ರಾರಂಭಿಸುವದಾಗಿ ತಿಳಿಸಿದರು.

