ಚಿಕ್ಕಪಡಸಲಗಿ ಹರಳಯ್ಯ ಶಾಲೆಯಲ್ಲಿ ಕನ್ನಡ ಕಂಪು | ರಾಜ್ಯೋತ್ಸವ ವೈಭವ | ಮಕ್ಕಳ ಹಷೋ೯ಲ್ಲಾಸ ಸಂಭ್ರಮ
ಉದಯರಶ್ಮಿ ದಿನಪತ್ರಿಕೆ
ಚಿಕ್ಕಪಡಸಲಗಿ: ಕನ್ನಡ ಭಾಷೆ ಉತ್ಕಟ,ಸುಗಂಧ ಭರಿತ ಭಾಷೆ. ಅದು ಕರುನಾಡಿನ ಹೃದಯ ಶ್ರೀಮಂತಿಕೆಯುಳ್ಳ ಮಾತೃಭಾಷೆ. ಎಲ್ಲರ ಮನಸ್ಸು ಸುಲಲಿತವಾಗಿ ಸೆಳೆಯುವ ಕನ್ನಡ ಪ್ರೀತಿಯ ಭಾಷೆ ಬಗೆಗೆ ಕಿಂಚಿತ್ತೂ ಉದಾಸೀನ ಮನೋಭಾವ ಯಾರಲ್ಲೂ ಬೇಡ ಎಂದು ಸಮಾಜ ವಿಜ್ಞಾನ ಶಿಕ್ಷಕಿ ಕವಿತಾ ಅಂಬಿ ನುಡಿದರು.
ಇಲ್ಲಿನ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಶುಕ್ರವಾರ 69 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡ ಭಾಷೆ ಬಗ್ಗೆ ಪ್ರತಿಯೊಬ್ಬರೂ ಪ್ರೇಮಭಾವ ಹೊಂದಿದಾಗ ಮಾತ್ರ ಕನ್ನಡದ ಪ್ರಗತಿ ಕಾಣಲು ಸಾಧ್ಯ ಎಂದರು.
ವಿಶ್ರಾಂತ ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಅನಂತಪೂರ ಮಾತನಾಡಿ, ಕನ್ನಡ ನುಡಿಗೆ ನವತನದ ಸೊಗಸಿದೆ. ಕನ್ನಡ ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿದೆ. ಕನ್ನಡ ನಾಡಿನ ಸ್ಥಾಪನೆಗೆ ಹಲವರು ಶ್ರಮಿಸಿದ್ದಾರೆ. ಅವರೆಲ್ಲರನ್ನು ಇಂದು ಗೌರವದಿಂದ ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಮುಖ್ಯ ಶಿಕ್ಷಕ ಬಸವರಾಜ ಜಾಲೋಜಿ ಮಾತನಾಡಿ, ವಿಜ್ಞಾನ, ತಂತ್ರಜ್ಞಾನದ ಜೊತೆಗೆ ಕನ್ನಡ ಅಭಿಮಾನ ಹೊಂದಬೇಕು. ಕನ್ನಡ ನಮ್ಮ ಬದುಕಿನ ಭಾಷೆ. ಕನ್ನಡ ಹೆಚ್ಚು ಬಳಕೆವಾಗಬೇಕು. ಕನ್ನಡ ಬಳಸಿ ಉಳಿಸಬೇಕಾಗಿದೆ.ಕನ್ನಡದ ಆಸ್ಮಿತೆ ಇನ್ನಷ್ಟು ಗಟ್ಟಿಯಾಗಿ ಕಟ್ಟವಂತಹ ಕೆಲಸ ಕನ್ನಡ ಮನಗಳಿಂದಲೇ ಆಗಬೇಕು ಎಂದು ಕರೆ ನೀಡಿದರು.
ತಾಯಿ ಭುವನೇಶ್ವರಿ, ಲಿಂ, ತೋಂಟದ ಡಾ, ಸಿದ್ದಲಿಂಗ ಶ್ರೀಗಳ ಭಾವಚಿತ್ರಕ್ಕೆ ಪೂಜೃ ಸಲ್ಲಿಸಿ ಗೌರವಿಸಲಾಯಿತು. ನಾಡಗೀತೆ, ರಾಷ್ಟ್ರಗೀತೆ ಹಾಡಲಾಯಿತು.
ವೇದಿಕೆಯಲ್ಲಿ ಪ್ರಭಾರ ಮುಖ್ಯಗುರು ಬಸವರಾಜ ಜಾಲೋಜಿ, ಹಿರಿಯ ಮಾರ್ಗದಶಿ೯ ಬಸವರಾಜ ಅನಂತಪೂರ, ಶಿಕ್ಷಕ ಲೋಹಿತ ಮಿಜಿ೯, ಈರಪ್ಪ ದೇಸಾಯಿ, ಶ್ರೀಶೈಲ ಹುಣಶಿಕಟ್ಟಿ, ಶಿಕ್ಷಕಿಯರಾದ ಸಹನಾ ಕಲ್ಯಾಣಿ(ಹತ್ತಳ್ಳಿ), ಕವಿತಾ ಅಂಬಿ ಮೊದಲಾದವರಿದ್ದರು.
ಕುಮಾರಿ ಕೀತಿ೯ ಕಲ್ಯಾಣಿ ಸುಂದರವಾಗಿ ಕಾರ್ಯಕ್ರಮ ನಿರೂಪಿಸಿದರು. ಭಾಗ್ಯಾ ಪಾಟೀಲ ವಂದಿಸಿದರು.
“ಕನ್ನಡ ಹೃದಯ ಹಂದರದ ಸೊಗಸಾದ ಭಾಷೆ. ಕನ್ನಡ ಭಾಷೆಯ ಸೊಗಡು ಅತ್ಯಂತ ಮೊನಚಾಗಿದೆ. ಅದು ಮನಸಿಗೆ ಹಿತಾನುಭವದ ರಸಸ್ವಾದ ನೀಡುತ್ತದೆ. ಕನ್ನಡ ಮಾತನಾಡುವುದೆಂದರೆ ಸಿಹಿ ಸಿಂಚನದ ಸಂಗಮದಲ್ಲಿ ತೇಲಿದಂತೆ. ಕನ್ನಡ ನಾಡಿನ ನುಡಿ ಪ್ರಭಾವತೆ ಹೊಂದಿದೆ. ಇದು ಯಾವದೇ ಮತಪಂಥದ ಭಾಷೆಯಲ್ಲ. ಎಲ್ಲರ ಮೆಚ್ಚಿನ ಭಾಷೆಯಾಗಿದೆ. ಈ ನೆಲದ ಮಣ್ಣಿನ ಕನ್ನಡ ಭಾಷೆ ಶ್ರೀಗಂಧದ ಭಾಷೆಯಾಗಿದೆ. ಸಂಸ್ಕೃತಿಯ ಸಂಸ್ಕಾರ ಹೊಂದಿದೆ. ಈ ಕನ್ನಡ ಭಾಷೆಗೆ ಧಕ್ಕೆ ಬಾರದಂತೆ ನೋಡಿಕೊಳ್ಳಲು ಸಂಕಲ್ಪ ಗೈಯಬೇಕಾಗಿದೆ. ಕನ್ನಡ ಮನಸ್ಸು ಸಾಮರಸ್ಯದ ಆಶಯಹೊಂದಿ ಕನ್ನಡದ ಒಳಿತನ್ನು ಸದಾಕಾಲವೂ ಬಯಸಬೇಕು.”
– ಗುಲಾಬಚಂದ ಜಾಧವ
ಶಿಕ್ಷಕರು
ಸಾಂಸ್ಕೃತಿಕ ಕಾರ್ಯಕ್ರಮಗಳು
ರಾಜ್ಯೋತ್ಸವ ಅಂಗವಾಗಿ ಕನ್ನಡದ ಶ್ರೇಷ್ಠತೆ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಕ್ಕಳು ನಡೆಸಿಕೊಟ್ಟರು. ಕನ್ನಡ ಕುರಿತಾದ ಗೀತ ಗಾಯನಕ್ಕೆ ಶಾಲಾ ವಿದ್ಯಾರ್ಥಿನಿಯರು ಪ್ರದಶಿ೯ಸಿದ ನೃತ್ಯಗಳು ಜನಮನ ಸೂರೆಗೊಂಡವು. ಕನ್ನಡ ಕಂಪನ್ನು ಸೂಸಿದ ಗೀತ ರಾಗದ ಕುಣಿತಕ್ಕೆ ಜನಮನ ಪುಳಕಿತಗೊಂಡವು. ಕುಮಾರಿ ಸ್ನೇಹಾ ಸಿದ್ದಾಪುರ ಭರತ ನಾಟ್ಯ ಪ್ರದಶಿ೯ಸಿದರೆ ಸ್ವಾತಿ ಯಲಗುದ್ರಿ,ಕಾವೇರಿ ಹಾದಿಮನಿ ಕನ್ನಡ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು. ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.

