ರಾಜ್ಯ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಖಾದಿ ಉತ್ಸವ-೨೦೨೪ಕ್ಕೆ ಚಾಲನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಖಾದಿ ದೇಶದ ಅಸ್ಮಿತೆಯಾಗಿದ್ದು, ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಖಾದಿ ಬಳಕೆಯೊಂದಿಗೆ ಉತ್ತೇಜನ-ಪ್ರೋತ್ಸಾಹ ಅತ್ಯಗತ್ಯವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವರು ಮತ್ತು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರು ಡಾ.ಎಂ.ಬಿ.ಪಾಟೀಲ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಖಾದಿ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನವೆಂಬರ್. ೧ರಿಂದ ೧೫ರವರೆಗೆ ನಗರದ ಸ್ಟೇಶನ್ ರಸ್ತೆಯಲ್ಲಿರುವ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದ ಆವರಣದಲ್ಲಿ ಆಯೋಜಿಸಿರುವ ರಾಜ್ಯ ಮಟ್ಟದ ಖಾದಿ ಮತ್ತು ಗ್ರ‍್ರಾಮೋದ್ಯೋಗ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳದ ಖಾದಿ ಉತ್ಸವ-೨೦೨೪ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶದ ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಮಹಾತ್ಮಗಾಂಧೀಜಿಯವರು ವಿದೇಶಿ ಉತ್ಪನ್ನಗಳಿಗೆ ಕಡಿವಾಣ ಹಾಕಿ ಖಾದಿ ಉತ್ಪನ್ನಗಳನ್ನು ಸ್ವ ನೇಯುವ ಮೂಲಕ ಸ್ವದೇಶಿ ಉತ್ಪನ್ನಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಖಾದಿ ದೇಶದ ಅಸ್ಮಿತೆ, ಸ್ವಾವಲಂಬನೆಯ ಪ್ರತಿಕವಾದ ಖಾದಿ ಉಳಿಸಿ ಬೆಳೆಸುವ ಅವಶ್ಯಕತೆ ಇದೆ ಎಂದು ಹೇಳಿದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಖಾದಿ ಉದ್ದಿಮೆ ಸಂಕಷ್ಟದಲ್ಲಿದೆ. ಹಲವು ಸಂಘ-ಸಂಸ್ಥೆಗಳು ಖಾದಿ ಪರಿಚಯಿಸಿ, ಬೆಳೆಸುವ ಛಲಹೊಂದಿ ಖಾದಿ ಮಾರುಕಟ್ಟೆ ವಿಸ್ತರಿಸುತ್ತಿದ್ದಾರೆ. ಖಾದಿಗೆ ವಿಶ್ವ ಮಟ್ಟದಲ್ಲಿ ಬ್ರಾö್ಯಂಡ್ ಸೃಷ್ಟಿ ಮಾಡುವ ಅವಶ್ಯಕತೆ ಇದೆ. ಖಾದಿ ಮಾರುಕಟ್ಟೆ ಹೆಚ್ಚಿಸಿ ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಬೇಕು. ಈ ದಿಸೆಯಲ್ಲಿ ಚಿಂತನೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಮಟ್ಟದಲ್ಲಿಯೂ ಸಹ ಗಮನ ಸೆಳೆಯಲಾಗುವುದು ಎಂದು ಹೇಳಿದ ಅವರು, ೧೫ ದಿನಗಳ ಆಯೋಜಿಸಿರುವ ಖಾದಿ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಖಾದಿ ಉತ್ಪನ್ನಗಳನ್ನು ಖರೀದಿಸುವ ಮೂಲಕ ಉತ್ತೇಜನ ನೀಡಬೇಕು ಎಂದು ಅವರು ಮನವಿ ಮಾಡಿಕೊಂಡರು.
ವಿಜಯಪುರ ಜಿಲ್ಲೆ ಒಂದು ಐತಿಹಾಸಿಕ ನಗರವಾಗಿದ್ದು, ಕಳೆದ ೧೦ ವರ್ಷಗಳಿಂದ ಖಾದಿ ಆಯೋಗ, ಖಾದಿ ಮಂಡಳಿಯ ವತಿಯಿಂದ ಜಿಲ್ಲಾ ಮಟ್ಟದ ಹಾಗೂ ರಾಜ್ಯ ಮಟ್ಟದ ಖಾದಿ ಮತ್ತು ಗ್ರಾಮೋದ್ಯೋಗ ವಸ್ತು ಪ್ರದರ್ಶನಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ವಿಜಯಪುರ ಜಿಲ್ಲೆಯಲ್ಲಿ ಖಾದಿ, ರೇಷ್ಮೆ ಹಾಗೂ ಉಣ್ಣೆಯ ವಸ್ತುಗಳಿಗೆ ಹೆಚ್ಚಿನ ಬೇಡಿಕೆ ಪ್ರಯುಕ್ತ ವಿಶೇಷವಾಗಿ ಶುದ್ಧ ರೇಷ್ಮೆ ಸೀರೆಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರದರ್ಶನ ಹಾಗೂ ಮಾರಾಟದ ವ್ಯವಸ್ಥೆ ಕಲ್ಪಿಸಲಾಗಿದೆ.
ಖಾದಿ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ವಿವಿಧ ೭೫ ವಸ್ತು ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆ ಸೇರಿದಂತೆ ರಾಜ್ಯದ ಹಾಗೂ ಹೊರ ರಾಜ್ಯಗಳಿಂದ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ವಿಜಯಪುರ, ಬಾಗಲಕೋಟೆ, ಗದಗ, ಬೆಳಗಾವಿ, ಧಾರವಾಡ, ದಾವಣಗೆರೆ, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು, ಬಳ್ಳಾರಿ, ಕೊಪ್ಪಳ, ಬೀದರ, ಮಂಡ್ಯ ಮೈಸೂರು. ಹಾಗೂ ಹೊರ ರಾಜ್ಯಗಳಿಂದ ವಸ್ತು ಪ್ರದರ್ಶನದಲ್ಲಿ ಅರಳೆ ಖಾದಿ, ಉಣ್ಣೆ ಖಾದಿ, ಪಾಲಿವಸ್ತ್ರ, ಶುದ್ಧ ಖಾದಿ ರೇಷ್ಮೆ ಸೀರೆಗಳು, ಕಸೂತಿ ಸೀರೆಗಳು, ಜಾಕೇಟ್, ಕರದಂಟು, ಸಿಹಿ ತಿಂಡಿಗಳು, ಡಿಜೈನ್ ಬ್ಯಾಗಗಳು, ಬಿದಿರು ಬೆತ್ತ, ರೆಡಿಮೇಡ್ ಶರ್ಟ್ಗಳು ಪಾದರಕ್ಷೆಗಳು ಪಿಠೋಪಕರಣಗಳ ಪ್ರದರ್ಶನ ಹಾಗೂ ಮಾರಾಟ ಮತ್ತು ಜಿಲ್ಲಾ ಪಂಚಾಯಿತಿ ವತಿಯಿಂದ ಸ್ವ ಸಹಾಯ ಗುಂಪಿನವರು ತಯಾರಿಸಿದ ಆಹಾರ ಹಾಗೂ ಕರಕುಶಲ ವಸ್ತುಗಳು ಪ್ರದರ್ಶನ ಏರ್ಪಡಿಸಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಹೆಚ್ಚಿನ ಮಾರಾಟವನ್ನು ನಿರೀಕ್ಷಿಸಲಾಗಿದೆ ಎಂದು ಖಾದಿ ಗ್ರಾಮೋದ್ಯೋಗ ಅಧಿಕಾರಿಗಳು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಮೇಯರ್ ಮಹೇಜಬಿನ್ ಹೊರ್ತಿ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕನಾನ್ ಮುಶ್ರೀಪ್,ಉಪ ಮೇಯರ್ ದಿನೇಶ ಹಳ್ಳಿ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ.ಟಿ ವೆಂಕಟೇಶ ಜಿಲ್ಲಾಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಕೆಕೆಜಿಎಸ್ ಅಧ್ಯಕ್ಷರಾದ ಬಿ.ಬಿ.ಪಾಟೀಲ (ಶೇಗುಣಸಿ) ಜಿಲ್ಲಾ ಖಾದಿ ಗ್ರಾಮೊದ್ಯೋಗ ಅಧಿಕಾರಿಗಳಾದ ನಾರಾಯಣ ಕಾಂಬಳೆ, ಅಭಿವೃದ್ದಿ ಅಧಿಕಾರಿಗಳು ಜಿಲ್ಲಾ ಖಾದಿ ಗ್ರಾಮೋದ್ಯೋಗ ಕಚೇರಿ ಬೆಳಗಾವಿಯ ಸಾವಿತ್ರಮ್ಮ ದಳವಾಯಿ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

