ಉದಯರಶ್ಮಿ ದಿನಪತ್ರಿಕೆ
ಇಂಡಿ: ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಸಾಲ ನೀಡುವ ಮೂಲಕ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮುಖ್ಯವಾಗಿ ರೈತರ ಶ್ರೇಯೋಭಿವೃಧ್ಧಿಗಾಗಿ ಶ್ರಮಿಸುತ್ತಿದೆ. ರೈತರ ಪ್ರೋತ್ಸಾಹಕ್ಕೆ ನಿಂತಿದೆ ಎಂದು ಬ್ಯಾಂಕಿನ ಅಭಿವೃದ್ಧಿ ಅಧಿಕಾರಿ ಎಮ್.ಜಿ. ಪಾಟೀಲ ಹೇಳಿದರು.
ಅವರು ಬುಧವಾರ ಪಟ್ಟಣದ ವಿಜಯಪೂರ ರಸ್ತೆಯಲ್ಲಿನ ವಿಡಿಸಿಸಿ ಬ್ಯಾಂಕ್ ಸಭಾಭವನದಲ್ಲಿ ಇಂಡಿ ಶಾಖೆಯಿಂದ ಹಮ್ಮಿಕೊಂಡಿದ್ದ ಗ್ರಾಹಕರ ಸಭೆಯಲ್ಲಿ ಮಾತನಾಡಿದರು.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಉದ್ದೇಶ, ಬೆಳವಣಿಗೆ ಹಾಗೂ ಪ್ರಗತಿ ಕುರಿತಂತೆ ವಿವರವಾಗಿ ತಿಳಿಸಿದರು. ಬ್ಯಾಂಕು ಈಗಾಗಲೇ ೨೪೯೬೮೪ ರೈತರಿಗೆ ಒಟ್ಟು ರೂ.೧೮.೬೩ ಕೋಟಿ ಕೃಷಿ ಸಾಲವನ್ನು ಸರಕಾರದ ಬಡ್ಡಿ ಸಹಾಯಧನ ಯೋಜನೆಯಡಿ ನೀಡಿದೆ. ಇದರೊಂದಿಗೆ ಬ್ಯಾಂಕಿನ ಗ್ರಾಹಕರಿಗೆ ವಿವಿಧ ಕೃಷಿಯೇತರ ಉದ್ದೇಶಗಳಿಗಾಗಿ ಒಟ್ಟು ರೂ.೧೨೪೭ ಕೋಟಿ ಸಾಲ ನೀಡಿದೆ ಎಂದು ತಿಳಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಗ್ರಾಹಕರಿಂದ ಬಂದ ಬೇಡಿಕೆಗಳು ಮತ್ತು ಪ್ರಶ್ನೆಗಳಿಗೆ ಉತ್ತರಿಸಿ ಸಾಲ ವಿತರಣೆಯಲ್ಲಿ ಸರಳತೆ ತರಲು ಬ್ಯಾಂಕಿನ ಆಡಳಿತ ಮಂಡಳಿ ಒಪ್ಪಿಗೆ ಮೇರೆಗೆ ಕ್ರಮವಹಿಸಲಾಗುವುದೆಂದು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ನಿರ್ದೇಶಕ ಕಲ್ಲನಗೌಡ ಬ. ಪಾಟೀಲ ಮಾತನಾಡಿ, ಬ್ಯಾಂಕಿನ ಅಧ್ಯಕ್ಷರಾದ ಶಿವಾನಂದ ಎಸ್. ಪಾಟೀಲ ಅವರ ನೇತೃತ್ವದಲ್ಲಿ ಬ್ಯಾಂಕು ಪ್ರಗತಿಪಥದಲ್ಲಿ ಸಾಗಿದ್ದು ಗ್ರಾಹಕ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಉಪಪ್ರಧಾನ ವ್ಯವಸ್ಥಾಪಕ ಎಮ್.ಎಚ್. ಹತ್ತೂರಕರ ಮಾತನಾಡಿದರು.
ವೇದಿಕೆಯಲ್ಲಿ ವಿ.ಹೆಚ್. ಬಿರಾದಾರ, ಅಶೋಕಗೌಡ ಬಿರಾದಾರ, ಶರಣು ಮೇಡೇದಾರ, ಆರ್.ಎಂ. ಬಣಗಾರ ವೇದಿಕೆಯಲ್ಲಿದ್ದರು.
ತಾಲೂಕಾ ನೋಡೆಲ್ ಅಧಿಕಾರಿ ಎಮ್.ಎಸ್. ದೇಸಾಯಿ ಸ್ವಾಗತಿಸಿದರು. ಇಂಡಿ ಶಾಖಾ ವ್ಯವಸ್ಥಾಪಕ ಐ.ಎಸ್. ತೆಲ್ಲೂರ ವಂದಿಸಿದರು.

