ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಕೀಲರು ಕಾನೂನು ಪಾಲನೆಯ ಆಧಾರ ಸ್ಥಂಭಗಳಿದ್ದಂತೆ. ಸಮಾಜದಲ್ಲಿ ಕಾನೂನಿನ ಅರಿವು ಮೂಡಿಸುವಲ್ಲಿ ಇವರ ಪಾತ್ರ ಬಹು ಮುಖ್ಯವಾಗಿದೆ ಎಂದು ಮದ್ರಾಸ್ ಫರ್ಟಿಲೈಝರ್ಸ್ ನ ಪ್ರಾಂತೀಯ ವ್ಯವಸ್ಥಾಪಕ ಡಿ.ಎಸ್.ದೇಶಪಾಂಡೆ ಹೇಳಿದರು.
ನಗರದಲ್ಲಿ ಅ.29 ಮಂಗಳವಾರದಂದು ಮದ್ರಾಸ್ ಫರ್ಟಿಲೈಝರ್ಸ್ ಲಿಮಿಟೆಡ್, ಶ್ರೀ ಸಿದ್ದೇಶ್ವರ ಕಾನೂನು ಮಹಾವಿದ್ಯಾಲಯ ವಿಜಯಪುರ ಹಾಗೂ ಜಿಲ್ಲಾ ಲೋಕಾಯುಕ್ತ ಕಚೇರಿ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ಶ್ರೀ ಸಿದ್ದೇಶ್ವರ ಕಾನೂನು ಮಹಾವಿದ್ಯಾಲಯದ ಆವರಣದಲ್ಲಿ ಏರ್ಪಡಿಸಿದ “ಜಾಗೃತ ಅರಿವು ಸಪ್ತಾಹ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ಶ್ರೀ ಸಿದ್ದೇಶ್ವರ ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯೆ ಶ್ರೀಮತಿ ಸುಷ್ಮಾ ದೇಸಾಯಿ ಮಾತನಾಡಿ, ಕೇವಲ ಕಾನೂನು ಮಾಡುವುದಲ್ಲ, ಅದನ್ನು ಆಚರಣೆಯಲ್ಲಿ ತರಬೇಕು ಎಂದರು.
ವಿಜಯಪುರದ ಜಿಲ್ಲಾ ಉಪ ಪೊಲೀಸ್ ವರಿಷ್ಠಾಧಿಕಾರಿ ಲೋಕಾಯುಕ್ತ ಸುರೇಶ್ ರೆಡ್ಡಿ ಅವರು, ಭ್ರಷ್ಟಾಚಾರ ಮುಕ್ತ ಭಾರತವನ್ನು ಹೇಗೆ ಕಟ್ಟಬೇಕು ಎಂದು ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ಮದ್ರಾಸ್ ಫರ್ಟಿಲೈಝರ್ಸ್ ನವರು ಪಾಲ್ಗೊಂಡಿದ್ದರು.
ಬಹುಮಾನ ವಿತರಣೆ
“ಜಾಗೃತ ಅರಿವು ಸಪ್ತಾಹ”ದ ಅಂಗವಾಗಿ ಭಾರತ ಸರ್ಕಾರದ ಉದ್ಯಮವಾದ ಮದ್ರಾಸ್ ಫರ್ಟಿಲೈಝರ್ಸ್ ಲಿಮಿಟೆಡ್ ನವರು ಕಾನೂನು ವಿದ್ಯಾರ್ಥಿಗಳಿಗೆ “ಕ್ವಿಜ್ ಕಾರ್ಯಕ್ರಮ”ವನ್ನು ಏರ್ಪಡಿಸಿದ್ದರು. ಗೆದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

