ಆಸ್ಪತ್ರೆ ಕಟ್ಟಡಕ್ಕಾಗಿ 4 ಎಕರೆ ಜಮೀನು ಮಂಜೂರು :ಸಚಿವ ಪಾಟೀಲ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಬಬಲೇಶ್ವರ ಪಟ್ಟಣದಲ್ಲಿ ತಾಲೂಕು ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕಾಗಿ 4 ಎಕರೆ ಜಮೀನನ್ನು ಮಂಜೂರು ಮಾಡಲಾಗಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.
ಬಬಲೇಶ್ವರ ಪಟ್ಟಣದ ಹಳೆಯ ತಹಶೀಲ್ದಾರ ಹತ್ತಿರ ಇರುವ ಸರಕಾರಿ ಗಾಯರಾಣ ಸರ್ವೇ ನಂ: 419 ರಲ್ಲಿ ಇರುವ ಒಟ್ಟು 7 ಎಕರೆ 33 ಗುಂಟೆ ಪೈಕಿ 4 ಎಕರೆ ಜಮೀನನ್ನು ತಾಲೂಕು ಆಸ್ಪತ್ರೆ ಕಟ್ಟಣ ನಿರ್ಮಾಣಕ್ಕಾಗಿ ಮಂಜೂರು ಮಾಡಲಾಗಿದೆ. ಈ ಆಸ್ಪತ್ರೆ 100 ಹಾಸಿಗೆಗಳನ್ನು ಒಳಗೊಂಡಿರಲಿದೆ.
ಬಬಲೇಶ್ವರ ಪಟ್ಟಣ ಮತ್ತು ತಾಲೂಕಿನ ಬಹುದಿನಗಳ ಬೇಡಿಕೆಯಾದ ತಾಲೂಕು ಆಸ್ಪತ್ರೆ ಕಟ್ಟಡಕ್ಕೆ ಈಗ ಜಮೀನು ಮಂಜೂರು ಆಗಿರುವುದರಿಂದ ಮುಂಬರುವ ದಿನಗಳಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾಗಲಿದೆ ಎಂದು ಸಚಿವ ಎಂ.ಬಿ.ಪಾಟೀಲ ಅವರು ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

