ನಾಗರಿಕ ಮೇಲ್ವಿಚಾರಣಾ ಸಮಿತಿ ಸದಸ್ಯರ ತಿಕೋಟಾ ತಾಲೂಕು ಮಟ್ಟದ ಸಮಾವೇಶ
ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಪಟ್ಟಣದಲ್ಲಿ ಅ.೨೮ ರಂದು ವಿಶಾಲಾ ಸ್ವಯಂ ಸೇವಾ ಸಂಸ್ಥೆ, ವಿಜಯಪುರ ವತಿಯಿಂದ ಅಜೀಂ ಪ್ರೇಮಜಿ ಪ್ರತಿಷ್ಠಾನದ ನೆರವಿನಿಂದ ತಿಕೋಟಾ ತಾಲೂಕಿನ ೦೬ ಗ್ರಾಮ ಪಂಚಾಯತಿಗಳಲ್ಲಿ ರಚನೆಯಾದ ನಾಗರಿಕ ಮೇಲ್ವಿಚಾರಣಾ ಸಮಿತಿ ಸದಸ್ಯರ ತಾಲೂಕು ಮಟ್ಟದ ಸಮಾವೇಶ ಜರುಗಿತು.
ಸಮಾವೇಶಕ್ಕೆ ತಾಲೂಕು ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಬಸವರಾಜ ಸಂಕಗೊಂಡ ಚಾಲನೆ ನೀಡಿ, ಮಾತನಾಡಿದರು.
ಸರಕಾರದ ಯೋಜನೆಗಳನ್ನು ಗ್ರಾಮೀಣ ಭಾಗದ ಜನರಿಗೆ ತಲುಪಿಸುವಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿವೆ. ಈ ನಿಟ್ಟಿನಲ್ಲಿ ಸಮಾವೇಶದಲ್ಲಿ ಭಾಗಿಯಾದ ಎಲ್ಲ ಸದಸ್ಯರು ಇಲ್ಲಿ ಪಡೆದುಕೊಂಡ ಮಾಹಿತಿಯನ್ನು ನಿಮ್ಮ ಗ್ರಾಮದ ಇತರ ಜನರಿಗೂ ತಿಳಿಸಿ ಹೇಳಿ ಅವರಿಗೂ ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಪ್ರೇರೆಪಿಸಬೇಕು ಎಂದರು.
ವಿಶಾಲಾ ಸಂಸ್ಥೆಯ ನಿರ್ದೇಶಕಿ ಸರೋಜಾ ಕಮಲಾಪುರ ಮಾತನಾಡಿ, ಸಂಸ್ಥೆ ಬೆಳೆದು ಬಂದ ದಾರಿಯ ಕುರಿತು ಮಾಹಿತಿ ನೀಡಿದರು.
ತಾಲೂಕು ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಂಯೋಜನಾಧಿಕಾರಿ ಕಲ್ಲಪ್ಪ ನಂದರಗಿ ಮಾತನಾಡಿ, ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕುರಿತು ಮಾಹಿತಿ ನೀಡಿದರು.
ಸಂಸ್ಥೆಯ ಯೋಜನಾ ವ್ಯವಸ್ಥಾಪಕ ರಮೇಶ ಭಜಂತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಗೀತಾ ಘಾಟಗೆ ವಂದಿಸಿದರು.
ಸಮಾವೇಶದಲ್ಲಿ ಸಂಪನ್ಮೂಲ ವ್ಯಕ್ತಿ ವಿಜಯಾ ಗಲಗಲಿ, ೦೬ ಗ್ರಾಮ ಪಂಚಾಯತಿಯ ನಾಗರಿಕ ಮೇಲ್ವಿಚಾರಣಾ ಸಮಿತಿ ಅಧ್ಯಕ್ಷರುಗಳು, ಸದಸ್ಯರುಗಳು ಸೇರಿದಂತೆ ಇತರರು ಇದ್ದರು.

