ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪರವಾನಗಿ ಭೂಮಾಪಕರರ ಮೇಲೆ ಪದೇ ಪದೇ ಪದೇ ಹಲ್ಲೆಯಾಗುತ್ತಿರುವುದನ್ನು ಖಂಡಿಸಿ, ಶಾಶ್ವತ ಪರಿಹಾರಕ್ಕಾಗಿ ರಾಜ್ಯ ಪರವಾನಗಿ ಭೂಮಾಪಕರ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾಧಿಕಾರಿಗಳ ಭೂಮಾಪನ ತಾಂತ್ರಿಕ ಸಹಾಯಕರು ಹಾಗು ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.
ಬಸವನಬಾಗೇವಾಡಿ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೋಲ್ಹಾರ ತಾಲೂಕು ಕಾರ್ಯಕ್ಷೇತ್ರವನ್ನು ಹೊಂದಿರುವ ಭೂಮಾಪಕ ಸದಾನಂದ ಹೆಗಡ್ಯಾಳರವರ ಮೇಲೆ ಹಲ್ಲೆಯಾಗಿದ್ದನ್ನು ಖಂಡಿಸಿ ಸಾಂಕೇತಿಕವಾಗಿ ಪ್ರತಿಭಟನೆ ಕೈಗೊಂಡು ಮನವಿ ಪತ್ರ ನೀಡಲಾಯಿತು.
ಈ ವೇಳೆ ರಾಜ್ಯ ಸಂಘದ ಉಪಾಧ್ಯಕ್ಷ ಎಸ್ ಕೆ. ಗಂಗಾಧರ ಮಾತನಾಡಿ, ಅತೀ ಸೂಕ್ಷ್ಮಪ್ರಕರಣಗಳಾದಂತ ಹದ್ದುಬಸ್ತು, ಕೋರ್ಟಕೇಸ್, ಪೋಡಿ ಮತ್ತು ತಕರಾರು ಪ್ರಕರಣಗಳನ್ನು ಯಾವುದೇ ಸೇವಾಭದ್ರತೆ, ಜೀವಭದ್ರತೆ, ಸಹಾಯಕರು (ಬಾಂದಜವಾನರು) ಹಾಗೂ ಕನಿಷ್ಟವೇತನ ಇಲ್ಲದೇ ಪ್ರಕರಣಗಳನ್ನು ಹಂಚಿಕೆ ಮಾಡುತ್ತಿರುವುದು ಖಂಡನೀಯ. ಈ ಘಟನೆಗೆ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದರು.
ಜಿಲ್ಲಾ ಅಧ್ಯಕ್ಷ ಲಾಲಸಾಬ ಹುಸೇನಸಾಬ ಮುಲ್ಲಾ ಮಾತನಾಡಿ, ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ವ್ಯಕ್ತಿಗಳ ಮೇಲೆ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ನಿರ್ದೇಶಕರಾದ ಷಣ್ಮುಕ ಪಿ ಆರ್, ಬಾಗಲಕೋಟೆ ಜಿಲ್ಲಾಧ್ಯಕ್ಷ ಬಂಡೆಪ್ಪ ಮತ್ತು ವಿಜಯಪುರ ಜಿಲ್ಲೆಯ ಎಲ್ಲಾ ತಾಲೂಕುಗಳ ಪರವಾನಗಿ ಭೂಮಾಪಕರು ಉಪಸ್ತಿತರಿದ್ದರು.

