ರೈತರ ಜಮೀನು ವಕ್ಫ್ ಮಂಡಳಿ ಹೆಸರಿಗೆ ಅಕ್ರಮ ವರ್ಗಾವಣೆ ಪ್ರಕರಣ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರೈತರ ಕೃಷಿ ಭೂಮಿಯನ್ನು ರಾಜಕೀಯ ದುರುದ್ದೇಶದಿಂದ ಅಕ್ರಮವಾಗಿ ಕರ್ನಾಟಕ ವಕ್ಫ್ ಮಂಡಳಿಗೆ ವರ್ಗಾವಣೆ ಮಾಡಿರುವ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ಕ್ರಮಕ್ಕೆ ಮುಂದಾಗಿದೆ. ಇದನ್ನು ಖಂಡಿಸಿ ಬಾಧಿತರ ಪರ ಧ್ವನಿಯಾಗಲು ರೈತ ಭಾರತ ಪಕ್ಷ ದಿಂದ ನವೆಂಬರ್ ಎರಡನೇ ವಾರ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದಿಂದ ಜಿಲ್ಲಾಧಿಕಾರಿ ಕಛೇರಿ ವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ರಾಜಕೀಯ ದುರುದ್ದೇಶದಿಂದ ಜಾತಿ, ಮತ, ಪಂಥಗಳ ಹೆಸರಿನಲ್ಲಿ ಸಮಾಜವನ್ನು ಒಡೆದಾಳುವ ಕೆಲಸ ಮಾಡಿರುವ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತ ಬಂದಿವೆ. ಇದೀಗ ಕಾಂಗ್ರೆಸ್ ಸರ್ಕಾರ ರೈತರ ಹೆಸರಿನಲ್ಲಿ ಸಮುದಾಯಗಳ ಮಧ್ಯೆ ಸಂಘರ್ಷ ಸೃಷ್ಟಿಸಲು ಮುಂದಾಗಿ. ಇದನ್ನು ಬಳಸಿಕೊಂಡು ರಾಜ್ಯದಲ್ಲಿ ಬಿಜೆಪಿ ರಾಜಕೀಯ ಲಾಭಕ್ಕೆ ಮುಂದಾಗಿದೆ ಎಂದು ಟೀಕಿಸಿದ್ದಾರೆ.
ವಿಜಯಪುರ ಜಿಲ್ಲೆಗೆ ಆಗಮಿಸಿದ್ದ ವಕ್ಫ ಸಚಿವ ಜಮೀರ್ ಅಹ್ಮದ್, ಮುಸ್ಲಿಂ ಸಮುದಾಯದ ಚಿಂತಿಸಿ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವ ಬದಲು ರೈತರ ಜಮೀನುಗಳನ್ನು ಅಕ್ರಮವಾಗಿ ವಕ್ಫ್ ಸಮಿತಿಗೆ ವರ್ಗಾಯಿಸುವ ಮೂಲಕ ಜಿಲ್ಲೆಯ ಅನ್ನದಾತರ ಬದುಕು ಬೀದಿಗೆ ತಳ್ಳುವ ಕೃತ್ಯಕ್ಕೆ ಮುಂದಾಗಿದ್ದಾರೆ. ಜಿಲ್ಲೆಯ ಸಚಿವರಾದ ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ ತಮ್ಮನ್ನು ತಾವು ಪ್ರಭಾವಿ ಸಚಿವರೆಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಜಿಲ್ಲೆಯ ಪ್ರಭಾವಿ ಸಚಿವರ ಗಮನಕ್ಕೆ ಬಾರದೇ ರೈತ ಬದುಕಿಗೆ ಕೊಳ್ಳಿ ಇಡುವ ಕೆಲಸ ನಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಜಿಲ್ಲೆಯ ರೈತರಿಗೆ ಸರ್ಕಾರ ಹಾಗೂ ವಕ್ಫ್ ಸಮಿತಿಯಿಂದ ಆಗಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಹಾಗೂ ರೈತರಿಗೆ ನ್ಯಾಯ ಕಲ್ಪಿಸಲು ರೈತ ಭಾರತ ಪಕ್ಷ ಬೀದಿಗಿಳಿದು ಹೋರಾಟ ಮಾಡಲು ಮುಂದಾಗಿದೆ ಎಂದಿದ್ದಾರೆ. ಜಿಲ್ಲೆಯ ರೈತರ ಜಮೀನುಗಳನ್ನು ಕಾನೂನು ಬಾಹಿರ ಹಾಗೂ ಅಕ್ರಮವಾಗಿ ವಕ್ಫ್ ಸಮಿತಿಗೆ ವರ್ಗಾಯಿಸಲು ಕಾರಣವಾಹಿರುವ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಸಾಮಾಜಿಕ ಕ್ಷೋಭೆ ಹೆಸರಿನಲ್ಲಿ ಪ್ರಕರಣ ದಾಖಲಿಸಿ ಬಂಧಿಸಬೇಕು. ರೈತರ ಜಮೀನುಗಳನ್ನು ಅಕ್ರಮವಾಗಿ ವಕ್ಫ್ ಸಮಿತಿ ಹೆಸರಿಗೆ ವರ್ಗಾಯಿಸಿರುವ ಜಿಲ್ಲಾಧಿಕಾರಿ, ಸಂಬಂಧಿಸಿದ ತಹಶಿಲ್ದಾರರು ಸೇರಿದಂತೆ ಕಂದಾಯ ಹಾಗೂ ವಕ್ಫ್ ಅಧಿಕಾರಿಗಳ ವಿರುದ್ಧ ಅಧಿಕಾರ ಸುರ್ಬಳಕೆ ಆಧಾರದಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು. ಅಲ್ಲದೇ ಜಿಲ್ಲೆಯ ಕಂದಾಯ, ವಕ್ಫ್ ಕಛೇರಿ ಅಧಿಕಾರಿಗಳು, ಸಿಬ್ಬಂದಿಯನ್ನು ಅಮೂಲಾಗ್ರವಾಗಿ ದೂರದ ಜಿಲ್ಲೆಗಳಿಗೆ ವರ್ಗಾಯಿಸಬೇಕು. ರೈತರನ್ನು ವಂಚಿಸುವ ನಡೆ ಅನುಸರಿಸಿದ ಪ್ರಕರಣದ ಅಮೂಲಾಗ್ರ ತನಿಖೆಗಾಗಿ ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ವಕ್ಫ್ ಹೆಸರಿನಲ್ಲಿ ಅಕ್ರಮವಾಗಿ ರೈತರ ಜಮೀನುಗಳನ್ನು ಕಬಳಿಸುವ ಸರ್ಕಾರದ ಕ್ರಮವನ್ನು ವಿರೋಧಿಸಿ ರೈತ ಭಾರತ ಪಕ್ಷದಿಂದ ನವೆಂಬರ್ ಎರಡನೇ ವಾರ ಹೊನವಾಡ ಗ್ರಾಮದಿಂದ ತೊರವಿ ಮಹಾಲಕ್ಷ್ಮಿ ದೇವಸ್ಥಾನ, ವಿಜಯಪುರದ ಸಿದ್ದೇಶ್ವರ ದೇವಸ್ಥಾನ ಮಾರ್ಗವಾಗಿ ಜಿಲ್ಲಾಧಿಕಾರಿ ಕಛೇರಿ ವರೆಗೆ ರೈತರ ಬೃಹತ್ ಪಾದಯಾತ್ರೆ ನಡೆಸುವುದಾಗಿ ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ತಿಳಿಸಿದ್ದಾರೆ. ಜಿಲ್ಲೆಯ ರೈತರ ಮೇಲೆ ನಡೆದಿರುವ ಈ ವಂಚನೆ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ರಾಜ್ಯದಲ್ಲಿರುವ ರೈತ ಹಾಗೂ ಜನಪರ ಸಂಘಟನೆಗಳು ಮುಕ್ತವಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

