ಉದಯರಶ್ಮಿ ದಿನಪತ್ರಿಕೆ
ಚಡಚಣ: ತಾಲೂಕಿನ ರೇವತಗಾಂವ ಗ್ರಾಮದಲ್ಲಿ ವಿದ್ಯುತ್ ತಂತಿ ಕಡಿದು ಬಿದ್ದುದ್ದರಿಂದಾಗಿ ಕಬ್ಬಿನ ಗದ್ದೆಗೆ ಬೆಂಕಿ ಬಿದ್ದು, ಕಟಾವಿಗೆ ಬಂದಿದ್ದ ಎರಡು ಎಕರೆ ಕಬ್ಬು ಸುಟ್ಟು ಭಸ್ಮವಾಗಿರುವ ಘಟನೆ ಸೋಮವಾರದಂದು ನಡೆದಿದೆ.
ನಿವರಗಿ ಕೆಇಬಿಯಿಂದ ರೇವತಗಾಂವ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಮೇನ್‌ಲೈನ್ ತಂತಿ ಹರಿದು ಅಪ್ಪಾಸಾಬ ಚನ್ನಗೊಂಡ ಹಾವಿನಾಳರವರು ಬೆಳೆದಿರುವ ಕಬ್ಬಿನ ಗದ್ದೆಗೆ ಬಿದ್ದುದ್ದರಿಂದಾಗಿ ಎರಡು ಎಕರೆ ಕಬ್ಬು ಸುಟ್ಟು ಹೋಗಿದೆ. ಸುಮಾರು ೩ ಲಕ್ಷದಷ್ಟು ಬೆಳೆ ಹಾನಿಯಾಗಿದೆ.
ಕೆಇಬಿ ಅಧಿಕಾರಿ ಭೇಟಿ: ನನ್ನ ಬೆಳೆಗೆ ಸೂಕ್ತ ಪರಿಹಾರ ನೀಡುವವರೆಗೆ ಹರಿದು ಬಿದ್ದಿರುವ ತಂತಿ ದುರಸ್ಥಿಗೊಳಿಸಲು ಅವಕಾಶ ಕಲ್ಪಿಸುವುದಿಲ್ಲ ಎಂದು ರೈತ ಹಟ ಹಿಡಿದಿರುವುದರಿಂದ ಸ್ಥಳಕ್ಕೆ ಚಡಚಣ ಪ್ರಭಾರಿ ಶಾಖಾಧಿಕಾರಿಗಳಾದ ಎಸ್.ಎಲ್.ಝಂಡೆ ಹಾಗೂ ಲೈನ್‌ಮನ್ ಅಂಬಿರವರುಗಳು ಭೇಟಿ ನೀಡಿ ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವ ಭರವಸೆಯನ್ನು ನೀಡಿದ್ದರು.
ಅಲ್ಲದೇ ಘಟನಾ ಸ್ಥಳಕ್ಕೆ ಗ್ರಾಮ ಸೇವಕ ಅಮಸಿದ್ದ ಬನ್ನೆ ಹಾಗೂ ಗ್ರಾಪಂ ಸದಸ್ಯ ಮಹಾದೇವ ಅಂಕಲಗಿ, ಚಡಚಣ ಪೊಲೀಸ್ ಠಾಣೆಯ ಸಿಬ್ಬಂದಿ ಕೆ.ಬಿ.ಪಾಟೀಲ ಹಾಗೂ ಕೆ.ಐ.ಹಗನೂರರವರುಗಳು ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಚಡಚಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

