ಉದಯರಶ್ಮಿ ದಿನಪತ್ರಿಕೆ
ಚಡಚಣ: ಪಟ್ಟಣವು ಮೊದಲಿನಿಂದಲೂ ಕಲೆ, ಸಾಹಿತ್ಯ, ವ್ಯಾಪಾರ ಹಾಗೂ ಧಾರ್ಮಿಕ ಭಾವನೆಗಳಿಂದ ಶ್ರೀಮಂತವಾದ ಊರು. ವೇದಾಂತಕೇಸರಿ ಪೂಜ್ಯ ಶ್ರೀ ಮಲ್ಲಿಕಾರ್ಜುನ ಶಿವಯೋಗಿಗಳು ಈ ಗ್ರಾಮದಲ್ಲಿ ಮೂರ್ಮೂರು ತಿಂಗಳವರೆಗೆ ನೀಡಿದ ಪ್ರವಚನದ ಜ್ಞಾನ-ಸುಧೆಯಿಂದ ಪಾವನವಾದ ನೆಲವಿದು. ಅವರ ಆಶೀರ್ವಾದದಿಂದಲೇ ಅನೇಕ ಸಂಘ-ಸಂಸ್ಥೆಗಳು ಜೀವ ತಳೆದವು. ಜ್ಞಾನಯೋಗಿ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ನಮ್ಮ ಚಡಚಣದಲ್ಲೇ ಶಿಕ್ಷಣ ಪಡೆದದ್ದು ಕೂಡಾ ಅಮರ ಇತಿಹಾಸ. ಪೂಜ್ಯನೀಯರ ಅಮೃತ ಕೃಪಾಶೀರ್ವಾದ ದೊರೆತಿರುವುದು ನಮ್ಮೆಲ್ಲರ ಸೌಭಾಗ್ಯವೇ ಸರಿ.
ಅಮೃತಾನಂದ ಸ್ವಾಮಿಗಳವರು ಬಾಲ್ಯದಲ್ಲಿಯೇ ಅಧ್ಯಾತ್ಮಿಕ ಸಾಧನೆಯಲ್ಲಿ ಆಸಕ್ತಿ ಹೊಂದಿದವರು. ಅವರ ತೀವ್ರವಾದ ಪಾರಮಾರ್ಥದ ಹಂಬಲ ತಮ್ಮ 14ನೇ ಕಿರಿಯ ವಯಸ್ಸಿನಲ್ಲಿಯೆ ತಂದೆ-ತಾಯಿ, ಬಂಧು-ಬಳಗ ಎಲ್ಲವನು ಪರಿತ್ಯಜಿಸಿ ವಿಜಯಪುರ ಜ್ಞಾನ ಯೋಗಾಶ್ರಮಕ್ಕೆ ಕರೆ ತಂದಿತು.
ಜ್ಞಾನಯೋಗಿ ಸಿದ್ದೇಶ್ವರ ಅಪ್ಪಗಳವರ ಸೇವೆ ಮಾಡುತ್ತಾ ಅವರ ಮಾರ್ಗದರ್ಶನದಲ್ಲಿ ಉಪನಿಷತ್ತುಗಳು, ಭಗವದ್ಗೀತೆ, ಭಾರತೀಯ ದರ್ಶನಗಳು, ವಚನಶಾಸ್ತ್ರ ಮೊದಲಾದ ಗ್ರಂಥಗಳ ಅಧ್ಯಯನ ಗೈದವರು. ಮತ್ತು ಯೋಗ ಸಾಧನೆಯಲ್ಲಿ ನೈಪುಣ್ಯರು. ಏಕಕಾಲದಲ್ಲಿ ಒಂದು ಲಕ್ಷ ಜನರನ್ನು ಸೇರಿಸಿ ಯೋಗ ಮಾಡಿಸಿ ಐದು ವಿಶ್ವದಾಖಲೆ ಬರೆದವರು.
ಚಡಚಣ ಪಟ್ಟಣದ ಶ್ರೀ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ನ. 03 ರಿಂದ ನ. 17 ರವರೆಗೆ ಪೂಜ್ಯ ಶ್ರೀ ಅಮೃತಾನಂದ ಶ್ರೀಗಳಿಂದ ಆಧ್ಯಾತ್ಮಿಕ ಪ್ರವಚನ ಪ್ರತಿದಿನವೂ ಬೆಳ್ಳಿಗೆ 6:15 ರಿಂದ 7:15 ವರೆಗೆ ಹತ್ತಾರು ಗ್ರಾಮದ ಸಾವಿರಾರು ಭಕ್ತರ ಭಾಗಿತ್ವದಲ್ಲಿ ಜರುಗಲಿದೆ.
ಈ ಪಾವನಮಯ ಪ್ರವಚನ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಪುನೀತರಾಗಬೇಕೆಂದು ಎಂದು ಚಡಚಣ ಆಧ್ಯಾತ್ಮಿಕ ಪ್ರವಚನ ಸೇವಾ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
