ಜನಸಾಮಾನ್ಯರಲ್ಲಿ ಇಲ್ಲದ ಗೊಂದಲ-ಆತಂಕ ಮೂಡಿಸುವುದು ಬೇಡ ಎಂದ ಸಚಿವ ಎಂ.ಬಿ ಪಾಟೀಲ್
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ತಿಕೋಟಾ ತಾಲೂಕಿನ ಹೊನವಾಡ ಗ್ರಾಮದ 10 ಸರ್ವೇ ನಂಬರುಗಳ 11 ಎಕರೆ ಆಸ್ತಿ ಮಾತ್ರ ವಕ್ಫ್ ಆಸ್ತಿ ಎಂದು ಗೆಜೆಟ್ ನೋಟಿಫಿಕೇಷನ್ ಆಗಿದ್ದು, ಅದರಲ್ಲಿ 10 ಎಕರೆ 14 ಗುಂಟೆ ಖಬರಸ್ತಾನ ಇದೆ. ಉಳಿದದ್ದು ಈದ್ಗಾ, ಮಸೀದಿ ಇತ್ಯಾದಿ ಕಟ್ಟಡಗಳಿವೆ ಹಾಗೂ ಈ ಭೂಮಿಯು ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಸೇರಿದ್ದು, ಯಾವುದೇ ರೈತರ ಖಾಸಗಿ ಜಮೀನು ಒಳಪಟ್ಟಿಲ್ಲ ಎಂಬುದನ್ನು ಗಮನಿಸಬೇಕು ಎಂದು ಕೈಗಾರಿಕೆ ಮೂಲಸೌಕರ್ಯ ಅಭಿವೃದ್ಧಿ ಮತ್ತು ವಿಜಯಪುರ ಜಿಲ್ಲೆ ಉಸ್ತುವಾರಿ ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.
ಈ ಕುರಿತು ಶನಿವಾರ ಪ್ರಕಟಣೆ ನೀಡಿರುವ ಅವರು ಹಜರತ್ ಪೀರ ದಸ್ತಿಗೀರ ಸಾಬ್ ಮೊಹಮ್ಮದ ಚಿಂಗ್ ಸಿಯಾ ತಖಿಯಾ ದರ್ಗಾ ವಿಜಯಪುರ ಮಹಾಲಬಾಗಯತ ಸೇರಿದ ಆಸ್ತಿಯಾಗಿದ್ದು, ಕೆಳಗಡೆ ತಪ್ಪಾಗಿ ಹೊನವಾಡ ಎಂದು ಸೇರಿದೆ. ಇದು ಗೊಂದಲಕ್ಕೆ ಕಾರಣವಾಗಿದೆ. ಈ ಯಾವ ರೈತರಿಗೂ ವಕ್ಫ್ ಸಮಿತಿ ಅಥವಾ ಸರ್ಕಾರದ ಇಲಾಖೆಯಿಂದ ಯಾವುದೇ ನೋಟಿಸಗಳು ಬಂದಿಲ್ಲ.
ಈಗಾಗಲೇ ಜಿಲ್ಲೆಯಲ್ಲಿ ಹಲವು ರೈತರಿಗೆ ವಕ್ಫ್ ಆಸ್ತಿ ನೋಟಿಸು ಬಂದಿದೆ ಎಂಬ ದೂರುಗಳಿದ್ದು, ವಕ್ಫ್ ಸಮಿತಿ ಮತ್ತು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಂದಾಯ ಇಲಾಖೆಯಲ್ಲಿ ಎಲ್ಲ ದಾಖಲೆಗಳನ್ನು ಕೂಲಕುಂಶವಾಗಿ ಪರಿಶೀಲಿಸುತ್ತಾರೆ. ಒಂದೆ ಒಂದು ಇಂಚು ರೈತರ ಜಾಗವು ಅನಗತ್ಯವಾಗಿ, ಆಧಾರ, ದಾಖಲೆಗಳಿಲ್ಲದೆ ವಕ್ಫ ಆಸ್ತಿ ಎಂದು ಸೇರಿಸಲಾಗುವುದಿಲ್ಲ.
ಈ ಕುರಿತು ಸಭೆಯನ್ನು ನಡೆಸಿ, ಎಲ್ಲ ಗೊಂದಲಗಳಿಗೆ ಉತ್ತರ ನೀಡಲಾಗುವುದು. ಈ ನಿಟ್ಟಿನಲ್ಲಿ ಸಂಸದ ಶ್ರೀ ತೇಜಸ್ವಿ ಸೂರ್ಯ ಅವರಾಗಲಿ ಮತ್ತೊಬ್ಬರಾಗಲಿ ರಾಜಕಾರಣ ಮಾಡಿ ಜನಸಾಮಾನ್ಯರಲ್ಲಿ ಇಲ್ಲದ ಗೊಂದಲ, ಆತಂಕ ಮೂಡಿಸುವುದು ಬೇಡ ಎಂದು ಸಚಿವ ಎಂ.ಬಿ ಪಾಟೀಲ್ ಹೇಳಿದ್ದಾರೆ.

