ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಸಮೀಪದ ವಂದಾಲ ಗ್ರಾಮದ ಶಾಕಂಬರಿ ಪ್ರೌಢಶಾಲೆಯ ಟೇಬಲ್ ಟೆನ್ನಿಸ್ ಬಾಲಕ ಹಾಗೂ ಬಾಲಕಿಯರ ತಂಡ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡಿದೆ.
ಈಚೆಗೆ ಅತಿಥೇಯ ಶಾಲೆಯಲ್ಲಿ ಆಯೋಜನೆಗೊಂಡಿದ್ದ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಟೂರ್ನಿಯ ಬಾಲಕ, ಬಾಲಕಿಯರ ಡಬಲ್ಸ್ ವಿಭಾಗದ ಪಂದ್ಯದಲ್ಲಿ ಈ ಶಾಲೆಯ ಸ್ಪರ್ಧಾಳುಗಳು ಪ್ರಥಮ ಸ್ಥಾನ ಪಡೆಯುವ ಮೂಲಕ ರಾಜ್ಯ ಮಟ್ಟದ ಕೂಟಕ್ಕೆ ಆರ್ಹತೆಯ ಪ್ರವೇಶ ಪಡೆದಿದ್ದಾರೆ.
೨೦೨೪-೨೫ ನೇ ಸಾಲಿನ ವಿಜಯಪುರ ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿಭಾಗದ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಕ್ರೀಡಾಕೂಟ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ವಿಜಯಪುರ ಸಂಯುಕ್ತಾಶ್ರಯದಲ್ಲಿ ವಂದಾಲ ಶಾಕಂಬರಿ ಪ್ರೌಢಶಾಲೆ ಆತಿಥ್ಯದಲ್ಲಿ ಜರುಗಿತು.
ಈ ಶಾಲೆಯ ಬಾಲಕರ ಹಾಗೂ ಬಾಲಕಿಯರ ವಿಭಾಗದ ಟೇಬಲ್ ಟೆನ್ನಿಸ್ ತಂಡ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಿಟ್ಟಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು ವಿಶೇಷ. ಬಾಲಕರ ವಿಭಾಗದಲ್ಲಿ ಸೋಮನಾಥ ಮಾದರ, ಗುರುರಾಜ ತಳಗಡಿ, ಹನಮನಗೌಡ ಢವಳಗಿ, ವಿನೋದ ಮಾದರ ರವಿ ಕಡಿಜಾಡರ ಐವರು ಆಟಗಾರರು ಇರುವ ತಂಡ ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡರೆ ಬಾಲಕಿಯರ ವಿಭಾಗದಲ್ಲಿ ಚಂದ್ರಕಲಾ ದಳವಾಯಿ, ನಿವೇದಿತಾ ಜಾಲಿಮಿಂಚಿ, ಕವಿತಾ ವಂದಾಲ, ರಾಧಿಕಾ ಮಸೂತಿ,ಮನುಜಾ ತಳಗೇರಿ ಆಯ್ಕೆಯಾಗಿದ್ದಾರೆ.
ಜಿಲ್ಲೆಯ ವಿವಿಧ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಂದ ಕ್ರೀಡಾಪಟುಗಳು ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯದಲ್ಲಿ ಭಾಗವಹಿಸಿ ತಮ್ಮ ಕೈಚಳದ ಮೂಲಕ ಟೇಬಲ್ ಟೆನ್ನಿಸ್ ಆಟದ ರಭಸಯುತ ಕೌಶಲ್ಯ ಪ್ರದರ್ಶಿಸಿದರು. ಡಬಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಶಾಕಂಬರಿ ಶಾಲೆಯ ಬಾಲಕ,ಬಾಲಕಿಯರು ಅತ್ಯಾಕರ್ಷಕ ಆಟದ ತಂತ್ರಗಳೊಂದಿಗೆ ಜಯಶಾಲಿಗಳಾಗಿ ಪ್ರಥಮ ಸ್ಥಾನ ಪಡೆದು ಮಿಂಚಿದರು. ವಿಜೇತರಿಗೆ ಪ್ರಶಸ್ತಿ ಪ್ರಮಾಣ ಪತ್ರ ಗಣ್ಯರು ವಿತರಿಸಿದರು.
ಸಂಸ್ಥೆಯ ಅಧ್ಯಕ್ಷ ಎಸ್.ಬಿ.ಇಜೇರಿ ಕ್ರೀಡಾಕೂಟ ಉದ್ಘಾಟಿಸಿದರು. ನಿರ್ದೇಶಕ ಬಸವಮತಪ್ಪಾ ಬಸರಕೋಡ, ಮುಖ್ಯ ಶಿಕ್ಷಕ ಆಯ್.ಎಸ್.ಸಾಗರ,ಬಿ.ಬಿ.ರಗಪ್ಪಗೋಳ,ಎ.ಎಸ್.ರೊಳ್ಳಿ,ಎಚ್.ಸಿ.ಬಜಂತ್ರಿ ಸೇರಿದಂತೆ ಗ್ರಾಮದ ಪ್ರಮುಖರಿದ್ದರು.
ಎ.ಎಸ್.ಕಂಠಿ ಸ್ವಾಗತಿಸಿ, ನಿರೂಪಿಸಿದರು. ಪಿ.ಎಚ್.ನಾಯಕ ವಂದಿಸಿದರು.

