ಉದಯರಶ್ಮಿ ದಿನಪತ್ರಿಕೆ
ಚಿಕ್ಕಪಡಸಲಗಿ: ಹಳೆ ಶಿಷ್ಯ ಬಳಗದ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಗುರು ಸೇವಾ ನಿವೃತ್ತಿ ಹೊಂದಿದ ಪ್ರಯುಕ್ತ ಹೃದಯಸ್ಪಶಿ೯ ಸನ್ಮಾನಿಸಿ ಗೌರವಿಸಿದರು.
ಇಲ್ಲಿನ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಅಮೋಘ ಸೇವೆ ಸಲ್ಲಿಸಿ ಇತ್ತೀಚೆಗೆ ವಯೋಸೇವಾ ನಿವೃತ್ತಿ ಹೊಂದಿರುವ ಬಸವರಾಜ ಅನಂತಪೂರ ದಂಪತಿಗಳಿಗೆ ಶಾಲೆಯ ಹಳೆ ಶಿಷ್ಯರು ಶಾಲು ಹೊದಿಸಿ ಸನ್ಮಾನಿಸಿದರಲ್ಲದೇ ಬಿನ್ನವತ್ತಳೆ ನೀಡಿ ಗೌರವಾರ್ಪಣೆ ಸಲ್ಲಿಸಿ ಧನ್ಯತಾಭಾವ ಮೆರೆದರು.
ಬಸವರಾಜ ಅನಂತಪೂರ ಮಕ್ಕಳ ಪಾಲಿನ ಅಚ್ಚುಮೆಚ್ಚಿನ ಗುರುಜಿ. ಅವರ ಕೈಯಲ್ಲಿ ಶಿಸ್ತು ಬದ್ದತೆಯ ಕ್ರೀಡಾಸಕ್ತಿ ಬೆಳೆಸಿಕೊಂಡಿದ್ದ 2006-07 ಹಾಗೂ 2008-09 ನೇ ಸಾಲಿನ ವಿದ್ಯಾರ್ಥಿಗಳು ಜಮಖಂಡಿಯಲ್ಲಿರುವ ತಮ್ಮ ಮೆಚ್ಚಿನ ಗುರುಜಿ ಮನೆಗೆ ತೆರಳಿ ಸನ್ಮಾನ ಕೈಂಕರ್ಯ ಕೈಗೊಂಡು ಪರಮ ಪವಿತ್ರತೆಯ “ಗುರು-ಶಿಷ್ಯರ” ನಿಷ್ಕಲ್ಮಶತೆಯ ಪ್ರೀತಿಭಾವವನ್ನು ಅನ್ಯೋನ್ಯತೆ ಪರಿಮಳದಲ್ಲಿ ಸಾಕ್ಷೀಕರಿಸಿದರು.
ಮಕ್ಕಳ ಕಲಿಕಾ ಸಮಯದಲ್ಲಿ ಅನಂತಪೂರ ಗುರುಜಿ ಆಟೋಟಗಳ ಜ್ಞಾನಧಾರೆ ಕರುಣಿಸಿ ಕ್ರೀಡಾ ತಂತ್ರಜ್ಞಾನದ ಕೌಶಲ್ಯ ಅಂಕುರಗೊಳಿಸಿದ್ದಾರೆ. ಹೀಗಾಗಿ ಮಕ್ಕಳಿಗೆ ಅವರೆಂದರೆ ಎಲ್ಲಿಲ್ಲದ ಪ್ರೀತಿ, ಗೌರವ. ಶಿಸ್ತಿನ ಸಿಪಾಯಿಗಳಾಗಿ ಚೇತೋಹಾರದ ಉಲ್ಲಾಸದಿಂದ ಗೈದ ಅನಂತಪೂರ ಅವರ ಶಿಕ್ಷಣ ಕ್ಷೇತ್ರದ ಕ್ರೀಡಾ ಸೇವೆ ಹಳೆ ವಿದ್ಯಾರ್ಥಿಗಳು ವಿನಮ್ರತೆಯಿಂದ ಸ್ಮರಿಸಿದರು.
ಹಳೆ ಶಿಷ್ಯರಾದ ವಿದ್ಯಾಲಿಂಗ ಹಿರೇಮಠ, ಶ್ರೀಶೈಲ ನ್ಯಾಮಗೌಡ, ಆನಂದ ಬಡಿಗೇರ, ಮಲ್ಲು ಜಂಗಮಶೆಟ್ಟಿ, ವೆಂಕಪ್ಪ ಸಂತಿ, ಪರಪ್ಪ ಗಡೇಣಿ, ಸದಾಶಿವ ದಾಸರ, ದಾನಯ್ಯ ಮಠಪತಿ ಮೊದಲಾದವರಿದ್ದರು.

