ಉದಯರಶ್ಮಿ ದಿನಪತ್ರಿಕೆ
ಚಿಕ್ಕಪಡಸಲಗಿ: ಸ್ವಾತಂತ್ರ್ಯದ ಕಹಳೆಯಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ತೋರಿದಂತಹ ಕೆಚ್ಚೆದೆಯ ದೈತ್ಯಾಕಾರದ ಧೈರ್ಯ, ಸಾಹಸ ಮಹಿಳಾ ಲೋಕಕ್ಕೆ ಆದರ್ಶತನದ ಸ್ಪೂತಿ೯ಯಾಗಿದೆ ಎಂದು ಪ್ರಭಾರ ಮುಖ್ಯೋಪಾಧ್ಯಾಯ ಬಸವರಾಜ ಜಾಲೋಜಿ ಹೇಳಿದರು.
ಇಲ್ಲಿನ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ವೀರವನಿತೆ ರಾಣಿ ಚೆನ್ನಮ್ಮನ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬ್ರಿಟಿಷ್ ಆಳ್ವಿಕೆಯ ಕಾಯ್ದೆಗಳನ್ನು ಪ್ರಬಲವಾಗಿ ವಿರೋಧಿಸಿದ ಚೆನ್ನಮ್ಮ ಸ್ವಾತಂತ್ರ್ಯದ ಕಿಚ್ಚು ಸೃಷ್ಟಿಸಿದ ಅಪ್ರತಿಮ ಧೀರ, ದಿಟ್ಟ ಮಹಿಳೆಯಾಗಿ ಗೌರವದಿಂದ ಮಿನುಗಿದ್ದಾರೆ.ಅವರು ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿಯಾಗಿ ಗೈದ ಶೌರ್ಯ, ಹೋರಾಟ ಎಂದೂ ಮರೆಯಲಾಗದು ಅವುಗಳು ಈಗ ಐತಿಹಾಸಿಕ ಪುಟಗಳಲ್ಲಿ ಸೇರಿವೆ. ಸ್ವಾಭಿಮಾನಿ ಚೆನ್ನಮ್ಮನಾಡು-ನುಡಿ ಉಳಿವಿಗಾಗಿ ಹಗಲಿರುಳು ತಪಿಸಿ ದೇಶ ಪ್ರೇಮ ಮೆರೆದಿದ್ದಾರೆ. ಜೀವದ ಹಂಗನ್ನು ತೊರೆದು ಪರಾಕ್ರಮದ ಭಾವದಿಂದ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿ ಜನಮನದಲ್ಲಿಂದು ಚೆನ್ನಮ್ಮ ಅಜರಾಮರವಾಗಿ ಉಳಿದಿದ್ದಾರೆ ಎಂದು ಜಾಲೋಜಿ ಸ್ಮರಿಸಿದರು.
ಗೌರವ ಶಿಕ್ಷಕಿ ಸಹನಾ ಹತ್ತಳ್ಳಿ, ಶಿಕ್ಷಕ ಗುಲಾಬಚಂದ ಜಾಧವ ಮಾತನಾಡಿದರು.
ಶಿಕ್ಷಕ ಲೋಹಿತ ಮಿಜಿ೯, ಈರಪ್ಪ ದೇಸಾಯಿ ಸೇರಿದಂತೆ ಸಿಬ್ಬಂದಿಗಳಿದ್ದರು.

