ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ದಿನನಿತ್ಯದ ಆಹಾರದಲ್ಲಿ ಆಯೋಡಿನ್ ಯುಕ್ತ ಉಪ್ಪನ್ನೆ ಬಳಸಿ ಆಯೋಡಿನ್ ಕೊರತೆಯ ನ್ಯೂನತೆಗಳನ್ನು ತಡೆಗಟ್ಟಬೇಕು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಅಪ್ಪಾಸಾಹೇಬ ಇನಾಮದಾರ ಹೇಳಿದರು
ಪಟ್ಟಣದ ರಾಂಪುರ ಪಿಎ ರಸ್ತೆಯಲ್ಲಿರುವ ಪ್ರೇರಣಾ ಪಬ್ಲಿಕ್ ಶಾಲೆಯಲ್ಲಿ ವಿಜಯಪುರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಮೀಕ್ಷಾ ಘಟಕ, ಹಾಗೂ ಪ್ರೇರಣಾ ಪಬ್ಲಿಕ್ ಶಾಲೆ ಸಹಯೋಗದೊಂದಿಗೆ ಹಮ್ಮಿಕೊಂಡ ರಾಷ್ಟ್ರೀಯ ಅಯೋಡಿನ್ ಕೊರತೆಯ ನ್ಯೂನತೆಗಳ ನಿಯಂತ್ರಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಯೋಡಿನ್ ಯುಕ್ತ ಉಪ್ಪು ಮಕ್ಕಳ ಹಾಗೂ ಕುಟುಂಬದ ಆರೋಗ್ಯ ಸಂರಕ್ಷಕ. ಆಯೋಡಿನ್ ಯುಕ್ತ ಉಪ್ಪು ಬಳಸದಿದ್ದರೆ ಮಕ್ಕಳಲ್ಲಿ ಬುದ್ದಿಮಾಂದ್ಯತೆ ಕಂಡುಬರುತ್ತದೆ. ಕಲಿಕೆಯಲ್ಲಿ ಹಿಂದುಳಿಯುವಿಕೆ, ದೈಹಿಕ ಮತ್ತು ಮಾನಸಿಕ ವಿಕಲತೆ, ಕುಂಠಿತ ಬೆಳವಣಿಗೆ, ಮಕ್ಕಳಲ್ಲಿ ಕಿವುಡು ಮತ್ತು ಮೂಕತನ ಕಂಡುಬರುವುದು, ಮೆಳ್ಳಗಣ್ಣು ಹಾಗೂ ನಡಿಗೆಯಲ್ಲಿ ಲೋಪದೋಷಗಳು ಕಂಡುಬರುತ್ತದೆ. ವಿದ್ಯಾರ್ಥಿಗಳು ತಮ್ಮ ಕುಟುಂಬ ಹಾಗೂ ನೆರೆಹೊರೆಯವರಿಗೆ ಇದರ ಕುರಿತು ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡದರು.
ಈ ವೇಳೆ ಜಿಲ್ಲಾ ಎಪಿಡೋಮೋಲೊಜಿಸ್ಟ ಡಾ.ಸುರೇಶ ಪಶ್ಚಾಪೂರ ಮಾತನಾಡಿ, ವಯಸ್ಕರಲ್ಲಿ ನಿಶಕ್ತಿ, ಕಾರ್ಯನಿರ್ವಹಣೆಯಲ್ಲಿ ವಿಪಲತೆ ಕಂಡುಬರುವುದು, ಗಳಗಂಡ ರೋಗ ಕಾಣಿಸಿಕೊಳ್ಳುತ್ತದೆ. ಗರ್ಬಿಣಿಯರಲ್ಲಿ ಪದೇ ಪದೇ ಗರ್ಭಪಾತ, ಶಿಶುಮರಣ, ಸತ್ತು ಹುಟ್ಟುವ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುವುದು. ಅದ್ದರಿಂದ ತಾವೆಲ್ಲರೂ ಆಯೋಡಿನ್ ಯುಕ್ತ ಉಪ್ಪನ್ನು ಸೇವನೆ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಗುರುಮಾತೆ ಸಾವಿತ್ರಿ ಅಸ್ಕಿ ವಹಿಸಿದ್ದರು. ಜಿಲ್ಲಾ ಸಮೀಕ್ಷಾ ಘಟಕದ ಅಧಿಕಾರಿ ಎಸ್.ಬಿ.ಹಿರೇಮಠ, ಅರುಣ ಮಾಚಕ್ಕನವರ, ಕಾಂತ ಗೋಗಿ, ತಾಲೂಕಾ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಹರಿ ಕುಲಕರ್ಣಿ, ಆರೋಗ್ಯ ನಿರೀಕ್ಷಣಾಧಿಕಾರಿ ವಿರೇಂದ್ರ ಪವಾಡೆ ಸೇರಿದಂತೆ ಶಾಲೆಯ ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.

